ಚಿತ್ರದುರ್ಗ: 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಹಳ್ಳಕ್ಕೆ ಬಿದ್ದ ಮೊದಲ ವಿಕೇಟ್ ಹಾಗೂ ಕುರಿ ನಾನೆ. ಆದರೆ ನನಗೆ ಯಾವುದೇ ರೀತಿಯ ಉಡುಗೊರೆ ಕೊಡಲಿಲ್ಲ, ರೆಡ್ ಕಾರ್ಪೆಟ್ ಹಾಸಲಿಲ್ಲ ಎಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರಲ್ಲಿ ಪಕ್ಷೇತರ ಶಾಸಕನಾಗಿದ್ದ ನಾನು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಲು ಅವಶ್ಯವಿದ್ದ ಮೂರು ಸ್ಥಾನಗಳಲ್ಲಿ ಬಿಜೆಪಿ ಹಾಕಿದ ಗಾಳಕ್ಕೆ ಬಿದ್ದ ಮೊದಲ ವಿಕೆಟ್ ಹಾಗೂ ಮೊದಲ ಕುರಿ. ಈಗ ಸಿಎಂ ಬಿಎಸ್ವೈ ಜೊತೆ ಲೆಫ್ಟ್, ರೈಟ್ ಇದ್ದವರು ಅಂದು ಯಾರೂ ರಾಜೀನಾಮೆ ಕೊಟ್ಟು ಬಂದಿರಲಿಲ್ಲ. ಇಷ್ಟಾದರೂ ಪ್ರಬಲ ಖಾತೆ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ, ಮೆಡಿಕಲ್ ಕಾಲೇಜು ಮತ್ತು ಸಾವಿರಾರು ಕೋಟಿ ರೂ. ಅನುದಾನ ಯಾವುದನ್ನೂ ನನಗೆ ಕೊಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.
Advertisement
Advertisement
ಅಂದು ಸರ್ಕಾರ ಬರಲು ನಾನೇ ಪ್ರಮುಖ ಕಾರಣ ಎಂದು ಎದೆ ತಟ್ಟಿ ಹೇಳುತ್ತೇನೆ. 2008ರಲ್ಲಿ ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ, ನೆಮ್ಮದಿಯಿಂದ ಶಾಸಕನಾಗಿ ಅಭಿವೃದ್ಧಿ ಮಾಡಲಾಗಲಿಲ್ಲ. ಹೀಗಾಗಿ ಆಗ ನನಗೆ ಆಗಿರೋ ಅನ್ಯಾಯವನ್ನು ಈಗ ಸರಿಪಡಿಸಬೇಕೆಂದು ಕೇಳುತ್ತೇನೆ. ನಾನು ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೂ ಸ್ಥಾನ ನೀಡುವರೆಂಬ ಭರವಸೆ ಇದೆ ಎಂದರು.
Advertisement
17 ಜನರ ತ್ಯಾಗದಿಂದಾಗಿ ಈಗ ಬಿಜೆಪಿ ಸರ್ಕಾರ ಬಂದಿದೆ ಎಂದು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗಿದೆ. ಅವರಲ್ಲಿ ನಾನು ಒಬ್ಬನೆಂದು ಪರಿಗಣಿಸಿ 17 ಜನರಿಗೆ ನ್ಯಾಯ ನೀಡುವುದರ ಜೊತೆಗೆ 18 ನೇಯವನಾಗಿ ನನ್ನನ್ನೂ ಪರಿಗಣಿಸಬೇಕು. ಬೋವಿ ಸಮುದಾಯದ ಕೋಟದಲ್ಲಿ ನನಗೆ ಸಚಿವ ಸ್ಥಾನ ನೀಡುವುದು ಬೇಡ ನನ್ನನ್ನೂ ಅನರ್ಹ ಶಾಸಕರಂತೆ ಸರ್ಕಾರ ಬರಲು ಕಾರಣನೆಂದು ಪರಿಗಣಿಸಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
Advertisement
ಹನಿಟ್ರ್ಯಾಪ್ ಮಂತ್ರಿಗಿರಿ ತಪ್ಪಿಸುವ ಷಡ್ಯಂತ್ರ
ಹನಿಟ್ರ್ಯಾಪ್ ಪ್ರಕರಣದಲ್ಲಿ ತಮ್ಮ ಹೆಸರೂ ಕೇಳಿ ಬಂದಿದ್ದರ ಕುರಿತು ಪ್ರತಿಕ್ರಿಯಿಸಿದ ಗೂಳಿಹಟ್ಟಿ ಶೇಖರ್, ನಾನು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಲ್ಲ. ಆ ರೀತಿ ಯಾರೊಂದಿಗು ಎಲ್ಲೂ ನಡೆದುಕೊಂಡಿಲ್ಲ. ಮಂತ್ರಿಗಿರಿ ತಪ್ಪಿಸುವ ಷಡ್ಯಂತ್ರ ನಡೆಯುತ್ತಿದೆ. ಯಾರೂ ನನಗೆ ಬ್ಲಾಕ್ಮೇಲ್ ಮಾಡಿಲ್ಲ. ಮಂತ್ರಿಗಿರಿ ರೇಸ್ ನಿಂದ ಹಿಂದೆ ಸರಿಸಲು ಈ ರೀತಿಯ ಷಡ್ಯಂತ್ರ ರೂಪಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.