ಬಾಗಲಕೋಟೆ: ಕಳೆದ ಒಂದು ತಿಂಗಳಿನಿಂದ ಶಾಲೆಯಲ್ಲಿ ನಿಗೂಢವಾಗಿ ಬೀಳುತ್ತಿದ್ದ ಪ್ರಕರಣಕ್ಕೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಶಾಲೆಯಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಶಾಲೆಯಲ್ಲಿ ಅದೃಶ್ಯವಾಗಿ ಬೀಳುತ್ತಿದ್ದ ಕಲ್ಲುಗಳಿಗೆ ಈಗ ಬ್ರೆಕ್ ಬಿದ್ದಿದೆ. ಆದರೆ ಇದರ ಹಿಂದಿನ ಮರ್ಮ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಇಂಜಿನವಾರಿ ಗ್ರಾಮದ ಶಾಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಿಗೂಢವಾಗಿ ಮಕ್ಕಳ ಮೇಲೆ ಕಲ್ಲುಗಳು ಬೀಳುತ್ತಿದ್ದವು. ಪರಿಣಾಮ ಹಲವು ಮಕ್ಕಳ ತಲೆಗೆ ಗಾಯಗಳಾಗಿತ್ತು. ಇದರಿಂದ ಭಯಭೀತರಾಗಿ ಮಕ್ಕಳು ಶಾಲೆ ಬಿಟ್ಟ ಘಟನೆಗಳು ಕೂಡ ನಡೆದು ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಭಾನಾಮತಿಯ ಕಾಟದಿಂದ ಕಲ್ಲು ಬೀಳುತ್ತಿವೆ ಎಂದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು.
Advertisement
Advertisement
ಸೋಮವಾರ ಮಾತ್ರ ಶಾಲೆಯಲ್ಲಿ ಕಲ್ಲುಗಳ ಸದ್ದಿಲ್ಲ. ಒಂದು ಕಲ್ಲು ಶಾಲೆಯತ್ತ ಮುಖ ಮಾಡಿಲ್ಲ. ಶಿಕ್ಷಣ ಇಲಾಖೆಯ ಸಿಬ್ಬಂದಿ ಶಾಲೆಯಲ್ಲಿ ಐದು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಶಾಲೆಯ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆದರೆ ಸೋಮವಾರ ಮಾತ್ರ ಶಾಲೆಯಲ್ಲಿ ಕಲ್ಲು ಬೀಳದೇ ಇರುವುದರಿಂದ ಶಾಲೆಯಲ್ಲಿ ಮಕ್ಕಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Advertisement
Advertisement
ಶಾಲೆಯಲ್ಲಿ ಅದೃಶ್ಯವಾಗಿ ಬೀಳುತ್ತಿದ್ದ ಕಲ್ಲುಗಳ ಪ್ರಕರಣದಿಂದ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷಾ ದೃಷ್ಠಿಯಿಂದ ಕಳೆದ ಎರಡು ದಿನಗಳಿಂದ ಶಾಲೆಗೆ ರಜೆ ಘೋಷಿಸಿತ್ತು. ಸೋಮವಾರ ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ ವಿಜ್ಞಾನ ಪರಿವೀಕ್ಷಕರು, ಪವಾಡ ಬಯಲು ತಜ್ಞರು ಶಾಲೆಗೆ ಭೇಟಿ ನೀಡಿ ಪವಾಡ ಬಯಲು ಮಾಡುವ ಪ್ರಯತ್ನ ಮಾಡಿದರು. ಮಕ್ಕಳ ಮುಂದೆ ಕೆಲ ತಾಂತ್ರಿಕ ಪ್ರಯೋಗ ಮಾಡಿದರು.ಶಾಲೆಯನ್ನೆಲ್ಲ ಜಾಲಾಡಿ ಕಲ್ಲು ಬೀಳುವ ಪ್ರಕರಣದ ಸತ್ಯಸತ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು. ಆದರೆ ವಿಜ್ಞಾನ ಪರಿವೀಕ್ಷಕರು, ಪವಾಡ ಬಯಲು ತಜ್ಞರು ಭೇಟಿ ನೀಡಿದಾಗಲೂ ಯಾವುದೇ ಕಲ್ಲುಗಳು ಬೀಳಲಿಲ್ಲ. ಆದರೆ ಮಕ್ಕಳು ಮಾತ್ರ ಎಂದಿನಂತೆ ಮಂತ್ರಿಸಿದಿ ನಿಂಬೆಹಣ್ಣು, ದೇವರ ಪ್ರಸಾದ ಹಿಡಿದುಕೊಂಡು ಬಂದದ್ದು ಮಾತ್ರ ಅಲ್ಲಿನ ಭಯದ ವಾತಾವರಣವನ್ನು ಪ್ರತಿಬಿಂಬಿಸುತ್ತಿತ್ತು.
ಸಿಸಿಟಿವಿ ಅಳವಡಿಕೆ, ಪೊಲೀಸ್ ಭದ್ರತೆ, ವಿಜ್ಞಾನ ಪರಿವೀಕ್ಷಕರು ಭೇಟಿ ಬಳಿಕ ಕಲ್ಲುಗಳು ಬೀಳುವುದಕ್ಕೆ ಬ್ರೇಕ್ ಬಿದ್ದಿದೆ. ಶಾಲೆ ಪರಿಶೀಲಿಸಿದ ಅಧಿಕಾರಿಗಳು ಹಾಗೂ ಪವಾಡ ಬಯಲು ತಜ್ಞರು ಇದು ಕಿಡಿಗೇಡಿಗಳ ಕಾರ್ಯ ಯಾವುದೇ ಬಾನಾಮತಿ ಕಾಟ ಎಂಬುದು ಸುಳ್ಳು. ಇದು ಮಾನವ ನಿರ್ಮಿತ ಕೃತ್ಯ ಇಂತಹ ವದಂತಿಗಳಿಗೆ ಕಿವಿಕೊಡಬಾರದು ಎಂದು ಸಲಹೆ ನೀಡಿದರು. ಜೊತೆಗೆ ಕೆಲವೇ ದಿನದಲ್ಲಿ ಇಂಜಿನವಾರಿ ಗ್ರಾಮದಲ್ಲಿ ಮೂಢನಂಬಿಕೆ, ಮಂತ್ರ ತಂತ್ರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.