ಬಾಗಲಕೋಟೆ: ಶಾಲಾ ಮಕ್ಕಳು ಮತ್ತು ಶಿಕ್ಷಕರ ಮೇಲೆ ನಿಗೂಢ ಕಲ್ಲುಗಳು ಬೀಳುತ್ತಿರುವ ವಿಚಿತ್ರ ಘಟನೆಯೊಂದು ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಇಂಜಿನವಾರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ದಿನನಿತ್ಯ ಶಾಲಾ ಸಮಯದಲ್ಲಿ ಮಕ್ಕಳು ಮತ್ತು ಮಕ್ಕಳಿಗೆ ಅದೃಶ್ಯ ರೀತಿಯಲ್ಲಿ ಕಲ್ಲುಗಳು ಬೀಳುತ್ತಿವೆ. ತರಗತಿ ಒಳಗೆ ಪಾಠ ಕೇಳುವಾಗ, ಶೌಚಾಲಯಕ್ಕೆ ಹೋಗುವಾಗ ದಿಢೀರ್ ಅಂತ ಕಲ್ಲುಗಳು ಬೀಳುತ್ತಿದ್ದು, ಇದೆಲ್ಲ ಬಾನಾಮತಿಯ ಕಾಟ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಕಲ್ಲು ಬೀಳುತ್ತಿರುವದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
Advertisement
Advertisement
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಕಿ ಜಯಶ್ರೀ ಕೆ.ಬಗಾಡೆ, ಕಳೆದ ಒಂದು ತಿಂಗಳಿನಿಂದ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿಯ ಮೇಲೆ ಕಲ್ಲುಗಳು ಬೀಳುತ್ತಿವೆ. ಕಲ್ಲುಗಳು ಬಿದ್ದ ಪರಿಣಾಮ ಸುಮಾರು 12 ವಿದ್ಯಾರ್ಥಿಗಳ ತಲೆಗೆ ಗಾಯಗಳಾಗಿದ್ದು, ಇನ್ನು ಕೆಲವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಶಾಲೆಯ ಎಸ್‍ಡಿಎಂಸಿ ಸದಸ್ಯರು, ಜಿಲ್ಲಾ ಶಿಕ್ಷಣ ಸಂಯೋಜಕರಿಗೂ ಪತ್ರ ಬರೆದಿದ್ದೇವೆ. ಮಕ್ಕಳು ಭಯಗೊಂಡು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಕಲ್ಲುಗಳು ಬೀಳುತ್ತಿರುವ ವಿಷಯ ತಿಳಿದು ಶಾಲೆಗೆ ಇಂದು ಗುಳೇದಗುಡ್ಡ ಪೊಲೀಸರು ಮತ್ತು ಶಿಕ್ಷಣ ಸಂಯೋಜಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.