ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ದೇವದುರ್ಗ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಎಫ್‍ಐಆರ್ ಗೆ ಕಲಬುರಗಿ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿದೆ.
ದೇವದುರ್ಗ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್ ವಿಚಾರಣೆಗೆ ತಡೆ ಕೋರಿ ಬಿಎಸ್‍ವೈ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಕಲಬುರಗಿ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ತೀರ್ಪು ಕಾಯ್ದಿರಿಸಿದ್ದರು. ಇಂದು ಹೈಕೋರ್ಟ್ ನ್ಯಾಯಮೂರ್ತಿ ಪಿಜಿಎಂ ಪಾಟೀಲ್ ಅವರು ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ಬಿ.ಎಸ್.ವೈ ಸೇರಿದಂತೆ ನಾಲ್ವರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ದೇವದುರ್ಗ ಠಾಣೆಯಲ್ಲಿ ದೂರು ನೀಡಿದ್ದರು.
1992 ಮತ್ತು 2004ರ ಹಾಗೂ ಇತ್ತೀಚಿಗಿನ ಕೆಲವು ಆಡಿಯೋ ಪ್ರಕರಣ ಆಧರಿಸಿ ಬಿಎಸ್‍ವೈ ಪರ ವಕೀಲರು ಭ್ರಷ್ಟಾಚಾರ ಪ್ರಕರಣದಡಿಯಲ್ಲಿ ಈ ಪ್ರಕರಣ ಬರುವುದಿಲ್ಲ. ಆಡಿಯೋ ಪ್ರಕರಣದಲ್ಲಿ ದೂರು ನೀಡಿದ ಶರಣಗೌಡ ಅವರು ಸಾಂವಿಧಾನಿಕ ಹುದ್ದೆಯಲ್ಲಿಲ್ಲ. ಮುಂದಿನ ದಿನಗಳಲ್ಲಿ ಸಹಾಯ ಮಾಡವುದಾಗಿ ಹೇಳಿದ್ರು. ಹೀಗಾಗಿ ಸೆಕ್ಷನ್ 8ರ ಅ ಭ್ರಷ್ಟಾಚಾರ ಪ್ರಕರಣದಡಿಯಲ್ಲಿ ಆಡಿಯೋ ಪ್ರಕರಣ ಬರುವುದಿಲ್ಲ ಎಂದು ಬಿಎಸ್ ವೈ ಪರ ವಕೀಲರು ಪ್ರಬಲವಾಗಿ ವಾದ ಮಂಡಿಸಿದ್ದರು. ಹೀಗಾಗಿ ಇಂದು ಕೋರ್ಟ್ ನಿಂದ ಮಧ್ಯಂತರ ತೀರ್ಪು ಹೊರ ಬಿದ್ದಿದ್ದು, ವಿಚಾರಣೆ ತಡೆ ಕೋರಿ ಆದೇಶಿಸಲಾಗಿದೆ.
ಫೆಬ್ರವರಿ 13ರಂದು ಪುತ್ರ ಶರಣಗೌಡ ಮೂಲಕ ಗುರುಮಿಟ್ಕಲ್ ಜೆಡಿಎಸ್ ಶಾಸಕ ನಾಗನಗೌಡಗೆ ಆಫರ್ ಕೊಟ್ಟಿದ್ದ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯ್ದೆಯಡಿ ಎಫ್.ಐ.ಆರ್ ದಾಖಲಾಗಿತ್ತು. ಐಪಿಸಿ- 1860, ಯು/ಎಸ್- 120ಬಿ, 504, 34 ಕಲಂ ಅಡಿ ಪ್ರಕರಣ ದಾಖಲಾಗಿತ್ತು. ಕೇಸ್‍ನಲ್ಲಿ ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದು, ಬಿಜೆಪಿ ಶಾಸಕರಾದ ಶಿವನಗೌಡ ನಾಯಕ್, ಪ್ರೀತಂಗೌಡ 2 ಮತ್ತು 3ನೇ ಆರೋಪಿಯಾಗಿದ್ದರು. ಸದ್ಯ ಬಿಎಸ್ ವೈ ಜೊತೆ ಶಾಸಕ ಶಿವನಗೌಡ ನಾಯಕ್, ಪ್ರೀತಂ ಗೌಡ ಸೇರಿ ನಾಲ್ವರಿಗೂ ರಿಲೀಫ್ ದೊರೆತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv