ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಗುಲಾಂನಬಿ ಆಜಾದ್ ಅವರು ರಾಜೀನಾಮೆ ಲಿಸ್ಟ್ ನಲ್ಲಿ ಇರುವ ಶಾಸಕರನ್ನು ಕರೆ ಮಾಡಿ ಮಾತನಾಡಿದ್ದಾರೆ.
ಗುಲಾಂನಬಿ ಆಜಾದ್ ಅವರು ಶಾಸಕರಾದ ಡಾ. ಸುಧಾಕರ್, ಅಂಜಲಿ ನಿಂಬಾಳ್ಕರ್, ಎಂ.ಟಿ.ಬಿ ನಾಗರಾಜ್ ಹಾಗೂ ಆನೇಕಲ್ ಶಿವಣ್ಣ ಅವರಿಗೆ ಕರೆ ಮಾಡಿದ್ದಾರೆ. ವೇಣುಗೋಪಾಲ್, ಪರಮೇಶ್ವರ್, ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಆಜಾದ್ ಕರೆ ಮಾಡಿದ್ದು, ಸುಧಾಕರ್ ಹಾಗೂ ಆನೇಕಲ್ ಶಿವಣ್ಣ ಕರೆ ಸ್ವೀಕರಿಸಲಿಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಸುಧಾಕರ್ ಹಾಗೂ ಶಿವಣ್ಣ ಅವರನ್ನು ಕರೆ ಮಾಡಿದ ಬಳಿಕ ಗುಲಾಂನಬಿ ವಸತಿ ಸಚಿವ ಎಂ.ಟಿ.ಬಿ ನಾಗರಾಜ್ ಅವರನ್ನು ಕರೆ ಮಾಡಿದ್ದಾರೆ. ಎಂಟಿಬಿ ಕರೆ ಸ್ವೀಕರಸಿ ತಾವು ಯಾವುದೋ ಸಭೆಯಲ್ಲಿ ಇದ್ದೇನೆ ಬಳಿಕ ನಿಮ್ಮನ್ನು ನಾನು ಬಂದು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.
ಇದಾದ ಬಳಿಕ ಗುಲಾಂನಬಿ ಆಜಾದ್ ಅವರು ಅಂಜಲಿ ನಿಂಬಾಳ್ಕರ್ ಅವರಿಗೆ ಕರೆ ಮಾಡಿದ್ದಾರೆ. ಆಗ ಅಂಜಲಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಸರ್ ಎಂದು ಕರೆಗೆ ಪ್ರತಿಕ್ರಿಯಿಸಿದ್ದಾರೆ.
ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಹಾಗಾಗಿ ಗುಲಾಂನಬಿ ಆಜಾದ್ ಕರೆ ಮಾಡಿ ಅವರ ಬಳಿ ಮಾತನಾಡಿದ್ದಾರೆ.