ಎಲ್ಲ ಸಮೀಕ್ಷೆಗಳು ಗುಜರಾತ್ ನಲ್ಲಿ ಈ ಬಾರಿ ಮತ್ತೆ ಕಮಲ ಅರಳಲಿದೆ ಎಂದು ಹೇಳಿದ್ದರೂ ಕಾಂಗ್ರೆಸ್ ಮಾತ್ರ ಈ ಬಾರಿ ಗೆಲುವು ನಮ್ಮದೇ ಎಂದು ಆತ್ಮವಿಶ್ವಾಸದಿಂದ ಪ್ರಚಾರದಲ್ಲಿ ತೊಡಗುತ್ತಿದೆ. ಮೋದಿ ಅಲೆ ಇಲ್ಲ, ಈಗ ಇಲ್ಲಿ ಇರುವುದು ಆಡಳಿತ ವಿರೋಧಿ ಅಲೆ. ಹೀಗಾಗಿ ಬಿಜೆಪಿ ಆಡಳಿತ ಈ ವರ್ಷಕ್ಕೆ ಕೊನೆಯಾಗಲಿದ್ದು ಮತ್ತ ಮತದಾರ ನಮ್ಮ ಕೈ ಹಿಡಿಯಲಿದ್ದಾನೆ ಎನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಇಷ್ಟು ಘಂಟಾಘೋಷವಾಗಿ ಕಾಂಗ್ರೆಸ್ ಹೇಳಿಕೊಳ್ಳಲು ಕಾರಣ ಏನಿರಬಹುದು ಎನ್ನುವುದಕ್ಕೆ ಇಲ್ಲಿ ಕೆಲ ಮಾಹಿತಿಗಳನ್ನು ನೀಡಲಾಗಿದೆ.
1. ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ
ಕಳೆದ ಇಪ್ಪತ್ತು ವರ್ಷದ ನಿರಂತರ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತೊಮ್ಮೆ ಗುಜರಾತ್ ಚುನಾವಣೆ ಹೋಗುತ್ತಿದೆ. ಸುದೀರ್ಘ ಕಾಲ ಆಡಳಿತ ನಡೆಸಿರುವ ಬಿಜೆಪಿ ಸಾಕಷ್ಟು ಕೆಲಸಗಳ ಮಾಡಿದರೂ ಅದರ ಹೊರತಾಗಿ ಆಡಳಿತ ವಿರೋಧಿ ಅಲೆ ಎದ್ದಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಹೆಚ್ಚು ರೈತ ವರ್ಗವಿರುವ ಅಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಬೆಲೆಗಳು ಇಳಿಕೆಯಾಗಿದ್ದರೂ ಕೆಲ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಜೊತೆಗೆ ಸರ್ಮಪಕ ನೀರಾವರಿ ಸೌಲಭ್ಯ ಕಲ್ಪಿಸಿದ್ದರೂ ಅದು ಕೆಲ ರೈತರ ಪಾಲಾಗಿದೆ. ಸಾಕಷ್ಟು ರೈತರು ನೀರಾವರಿ ಯೋಜನೆ ಲಾಭ ಪಡೆದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸಿಎಂ ಬದಲಾದರೂ ಪರಿಣಾಮಕಾರಿ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪವಿದೆ.
Advertisement
2. ಮತ ಹಂಚಿಕೆಯಲ್ಲಿ ಕುಸಿತ
2012ರಲ್ಲಿ 72.5% ಮತದಾನ ನಡೆದಿದ್ದು, 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 63.6% ಮತದಾನ ನಡೆದಿದ್ದು, ಎಲ್ಲ 26 ಸ್ಥಾನಗಳನ್ನು ಬಿಜೆಪಿ ಜಯಗಳಿಸಿತ್ತು. ಬಿಜೆಪಿಗೆ 60.1% ಮತ ಬಿದ್ದರೆ, ಕಾಂಗ್ರೆಸ್‍ಗೆ 33.5% ಮತ ಬಿದ್ದಿತ್ತು. ವಿಧಾನ ಸಭಾ ಚುನಾವಣೆಗೆ ಹೋಲಿಸಿದರೆ ಲೋಕಸಭೆಯಲ್ಲಿ ಬಿಜಿಪಿಗೆ ಬಿದ್ದ ಪ್ರಮಾಣ ಕಡಿಮೆಯಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ವಿವಿಧ ಚುನಾವಣೆಯಲ್ಲಿ ಬಿಜೆಪಿಗೆ ಬೀಳುತ್ತಿರುವ ಮತ ಪ್ರಮಾಣ ಕಡಿಮೆಯಾಗಿದೆ. ಕೆಲ ದಿನಗಳ ಹಿಂದೆ ಪ್ರಕಟವಾದ ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಸಾಬೀತಾಗಿದೆ.
Advertisement
Advertisement
3. ನಾಯಕತ್ವದ ಸಮಸ್ಯೆ
ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಅವರಂತಹ ಡೈನಾಮಿಕ್ ಮುಖ್ಯಮಂತ್ರಿ ಅಭ್ಯರ್ಥಿ ಸದ್ಯ ಬಿಜೆಪಿಯಲ್ಲಿ ಯಾರು ಕಂಡು ಬರುತ್ತಿಲ್ಲ. ಮೋದಿ ಬಳಿಕ ಆನಂದಿ ಬೆನ್ ಮುಖ್ಯಮಂತ್ರಿ ಆದರೂ ನಂತರದ ಬೆಳವಣಿಗೆಯಲ್ಲಿ ಅವರನ್ನು ಕೆಳಗೆ ಇಳಿಸಿ ವಿಜಯ್ ರೂಪಾನಿ ಸಿಎಂ ಆಗಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇರುವುದು ಸ್ಪಷ್ಟವಾಗಿದೆ.
Advertisement
4. ಬಹುಪಾಲು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳು
ಸುಮಾರು 50% ಜನಸಂಖ್ಯೆ ಗುಜರಾತ್‍ನ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದೆ. ಸಾಂಪ್ರದಾಯಿಕವಾಗಿ ನಗರ ಪ್ರದೇಶಗಳಲ್ಲಿ ಬಿಜೆಪಿ ಶಕ್ತಿಶಾಲಿಯಾಗಿದೆ. ನಗರದ ಯುವ ಜನತೆ ಮೋದಿ ಪರವಾಗಿದ್ದರೆ ಹಳ್ಳಿ ಮಂದಿ ಇನ್ನು ಕಾಂಗ್ರೆಸ್ ಪರವಾಗಿದ್ದಾರೆ. ಬಿಜೆಪಿಯಲ್ಲಿ 54% ಶಾಸಕರು ನಗರ ಭಾಗದಿಂದ ಆಯ್ಕೆಯಾದರೆ, ಕಾಂಗ್ರೆಸ್ ನ 74% ಶಾಸಕರು ಗ್ರಾಮೀಣ ಭಾಗದಿಂದ ಆಯ್ಕೆಯಾಗಿ ಬರುತ್ತಾರೆ. ಈ ಹಿಂದೆ ಬಿಜೆಪಿ ಗೆದ್ದಿರುವ ಆರು ಮುನ್ಸಿಪಲ್ ಪ್ರದೇಶಗಳು ನಗರ ಪ್ರದೇಶ ವ್ಯಾಪ್ತಿಯದು. ಗ್ರಾಮೀಣ ಪ್ರದೇಶಗಳಲ್ಲಿ 79 ಸ್ಥಾನಗಳ ಪೈಕಿ ಕೇವಲ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಗುಜರಾತ್ ವಿಧಾನಸಭೆ ಸ್ಥಾನಗಳ ಸಂಖ್ಯೆ 182 ಈ ಪೈಕಿ ಗ್ರಾಮೀಣ ಭಾಗದಲ್ಲಿ 112 ಸೀಟುಗಳಿದ್ದರೆ, ನಗರ ಭಾಗದಲ್ಲಿ 70 ಸೀಟುಗಳಿವೆ. ಹೀಗಾಗಿ ಮೇಲಿನ ಮುನ್ಸಿಪಲ್ ಚುನಾವಣಾ ಫಲಿತಾಂಶದ ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿಗಿಂತ ಕಾಂಗ್ರೆಸ್ ಒಂದು ಕೈ ಮೇಲಿದೆ.
5. ಕಾಂಗ್ರೆಸ್‍ನತ್ತ ಮುಸ್ಲಿಮರು ವಾಪಸ್?
ಸುಮಾರು 20-25% ರಷ್ಟು ಪ್ರಮಾಣದಲ್ಲಿ ಮುಸ್ಲಿಮರು ಗುಜರಾತ್ ನಲ್ಲಿ ವಾಸವಾಗಿದ್ದಾರೆ. 2012 ರ ಮಾಹಿತಿ ಪ್ರಕಾರ 31% ಮತಗಳನ್ನು ಇವರು ಬಿಜೆಪಿ ಪರವಾಗಿ ಚಲಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಬಿಜೆಪಿ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸುತ್ತಿದ್ದು ಈ ಬಾರಿ ಒಬ್ಬರಿಗೂ ಟಿಕೆಟ್ ನೀಡಿಲ್ಲ. ಇತ್ತೀಚಿಗೆ ಗೋವು ಹಾಗೂ ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿ ಪರಿಣಾಮ ಬೀರಬಹುದು. ರಾಜ್ಯದ ಜನಸಂಖ್ಯೆಯಲ್ಲಿ 10% ಮುಸ್ಲಿಂ ಮತಗಳ ಪಾಲನ್ನು ಬಿಜೆಪಿ ಹೊಂದಿದೆ. ಹೀಗಾಗಿ ಮೂರನೇ ಎರಡು ಭಾಗದಷ್ಟು ಮತಗಳ ಕಳೆದುಕೊಂಡರೆ ಇದು ರಾಜ್ಯದ 36 ಸ್ಥಾನಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ:ಗುಜರಾತ್ ಚುನಾವಣೆ: ಮತ್ತೆ ಮೋದಿ ಗೆಲುವಿಗೆ ಕಾಂಗ್ರೆಸ್ ಹಾಕಿ ಕೊಟ್ಟಿತಾ ರೆಡ್ ಕಾರ್ಪೆಟ್?
6. ಕೇಂದ್ರ ಸರ್ಕಾರದ ಪ್ರಭಾವ
ಈ ವರ್ಷದ ಅಂತ್ಯದ ವೇಳೆಗೆ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮೂರುವರೆ ವರ್ಷಗಳನ್ನು ಪೂರೈಸಲಿದೆ. ಕೇಂದ್ರ ಸರ್ಕಾರದ ಆಡಳಿತವೂ ಕೂಡಾ ಗುಜರಾತ್ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗೆಳೆಯುಂತಿಲ್ಲ. ಗುಜರಾತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳಿದ್ದಾರೆ. ಹೀಗಾಗಿ ನೋಟ್‍ಬ್ಯಾನ್, ಜಿಎಸ್‍ಟಿ ಜಾರಿಯಿಂದ ತೊಂದರೆಯಾಗಿ ವ್ಯಾಪಾರ ಕುಂಠಿತಗೊಂಡಿದ್ದಲ್ಲಿ ಅವರ ಮತ ನಮಗೆ ಬಿದ್ದೇ ಬೀಳುತ್ತದೆ ಎಂದು ಹೇಳುತ್ತಿದ್ದಾರೆ ಕಾಂಗ್ರೆಸ್ ನಾಯಕರು.
7. ಪಾಟೀದಾರ್ ಸಮುದಾಯದ ವಿರೋಧ
ಪಾಟೀದಾರ್ ಮೀಸಲಾತಿ ಆಂದೋಲನವನ್ನು ನಿರ್ವಹಿಸುವಲ್ಲಿ ಬಿಜೆಪಿ ಆರಂಭದಲ್ಲಿ ಎಡವಿತ್ತು. ಇದರಿಂದ ಇದು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಈ ಆಂದೋಲನವಾಗಿ ಬೆಳೆಯತೊಡಗಿತು ಇದರ ಜೊತೆಗೆ ಆನಂದಿಬೇನ್ ಪಟೇಲ್ ಸಿಎಂ ಆದ ಬಳಿಕವೂ ಈ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಬೆಂಬಲ ವ್ಯಕ್ತವಾಗದ ಹಿನ್ನೆಲೆ ಪಾಟೀದಾರರು ಬದಲಿ ರಾಜಕೀಯ ಆಯ್ಕೆಗಳನ್ನು ಹುಡುಕಿಕೊಳ್ಳುವಂತೆ ಮಾಡಿದೆ. ಗುಜರಾತ್ ನಲ್ಲಿ ಸುಮಾರು 16% ಪಾಟೀದಾರ್ ಸಮುದಾಯವಿದೆ. ಇವರು ಸಾಂಪ್ರದಾಯಿಕವಾಗಿ ಬಿಜೆಪಿ ಬೆಂಬಲಿರಾಗಿದ್ದು ಕಳೆದ ಲೋಕಸಭೆಯಲ್ಲಿ 70% ಮತಗಳನ್ನು ಬಿಜೆಪಿ ಪರವಾಗಿ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಪಾಟೀದಾರ್ ಸಮುದಾಯ ಬಿಜೆಪಿಯ ಒಟ್ಟು ಮತಹಂಚಿಕೆಯಲ್ಲಿ ಐದನೇ ಒಂದು ಭಾಗವನ್ನು ಹೊಂದಿದ್ದು, 73 ಸ್ಥಾನಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆದ್ದರಿಂದ ಈ ಮತಗಳು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಐತಿಹಾಸಿಕ ಗೆಲುವಿಗೆ ಸಹಕಾರಿಯಾಗಲಿದೆ. 2012 ರಲ್ಲಿ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನೇತೃತ್ವದ ಗುಜರಾತ್ ಪರಿವರ್ತನಾ ಪಾರ್ಟಿ 3.6% ಮತಗಳನ್ನು ಪಡೆದುಕೊಂಡಿತು ಇದಷ್ಟೇ ಅಲ್ಲದೇ ಸೌರಾಷ್ಟ್ರ ಮತ್ತು ಕಚ್ ನಲ್ಲಿ 23 ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು. 2012ಕ್ಕೆ ಹೋಲಿಸಿಕೊಂಡರೆ ಇದರ ಪ್ರಮಾಣ ಮತ್ತಷ್ಟು ದೊಡ್ಡದಾಗಿದ್ದು ಪಾಟೀದಾರ್ ಅವರನ್ನು ನ್ನು ಯಾರೇ ಎದುರು ಹಾಕಿಕೊಂಡರು ಅಪಾಯ ಖಚಿತ. ಇದನ್ನೂ ಓದಿ: ಮತ್ತೆ ಗುಜರಾತ್‍ನಲ್ಲಿ ಕಮಲ ಅರಳೋದು ಖಚಿತ! ಯಾವ ಸಮೀಕ್ಷೆ ಏನು ಹೇಳಿದೆ?