Connect with us

Gujarat Election

ಗುಜರಾತ್‍ನ ಪೋರ್‌ಬಂದರ್ ನಲ್ಲಿ ಮುಸ್ಲಿಮರು ಬಿಜೆಪಿ ವಿರೋಧಿಸೋದು ಯಾಕೆ ಗೊತ್ತಾ?

Published

on

ಗಾಂಧಿನಗರ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯ ಒಟ್ಟಾಗಿ ಬಿಜೆಪಿಯನ್ನು ಬೆಂಬಲಿಸಿತು. ಕಾರಣ ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ಬಗ್ಗೆ ತೋರಿಸಿದ್ದ ಆಸಕ್ತಿ. ಸುಪ್ರೀಂಕೋರ್ಟ್ ನಲ್ಲಿ ತ್ರಿವಳಿ ತಲಾಕ್ ವಿರುದ್ಧ ಧ್ವನಿ ಎತ್ತಿದ ಕೇಂದ್ರ ಸರ್ಕಾರದ ನಡೆಯನ್ನು ಉತ್ತರ ಪ್ರದೇಶದ ಮಹಿಳೆಯರು ಶ್ಲಾಘಿಸಿದರು. ಹೀಗಾಗಿ ನಿರೀಕ್ಷೆ ಮೀರಿ ಅದ್ಭುತ ಗೆಲುವನ್ನು ಉತ್ತರಪ್ರದೇಶದಲ್ಲಿ ಬಿಜೆಪಿ ಸಾಧಿಸಿತ್ತು. ಆದ್ರೆ ಗುಜರಾತ್ ನಲ್ಲಿ ಇದೇ ತ್ರಿವಳಿ ತಲಾಕ್ ಬಿಜೆಪಿಗೆ ಮುಳುವಾಗು ಸಾಧ್ಯತೆ ಇದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

ಗುಜುರಾತ್‍ನ ಪೋರ್‌ಬಂದರ್ ಹೆಚ್ಚು ಮುಸ್ಲಿಂ ಪ್ರಾಬಲ್ಯ ಹೊಂದಿರುವ ಪ್ರದೇಶ. ಈ ಹಿನ್ನೆಲೆ ಮುಸ್ಲಿಮ್ ಅಭಿಪ್ರಾಯಕ್ಕಾಗಿ ಕೆಲ ಯುವಕರು ಸೇರಿದಂತೆ ಮುಸ್ಲಿಮ್ ಮುಖಂಡರ ಜೊತೆ ಸುದ್ದಿ ಸಂಸ್ಥೆಯೊಂದು ಮಾತುಕತೆ ನಡೆಸಿದ್ದು, ಮಾತುಕತೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಮುಸ್ಲಿಮರು ಸಿಟ್ಟಾಗಿರುವುದು ಸ್ವಷ್ಟವಾಗಿದೆ. ಪೋರ್‍ಬಂದರ್ ನ ಮುಸ್ಲಿಮ್ ಸಮುದಾಯವು ಪ್ರಧಾನಿ ನರೇಂದ್ರ ಮೋದಿಯನ್ನು ನಂಬಲು ತಯಾರಿಲ್ಲ. ಮುಸ್ಲಿಮ್ ಧಾರ್ಮಿಕ ವ್ಯವಹಾರಗಳಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡುತ್ತಿದೆ ಎನ್ನುವ ಗಂಭೀರ ಆರೋಪ ಮೋದಿ ಸರ್ಕಾರದ ಮೇಲಿದೆ. ಇತ್ತೀಚಿಗೆ ತೆಗೆದುಕೊಂಡ ತ್ರಿವಳಿ ತಲಾಕ್ ವಿರುದ್ಧ ತೆಗೆದುಕೊಂಡ ನಿರ್ಣಯದಿಂದ ಪೋರ್‍ಬಂದರ್ ಮುಸ್ಲಿಂ ಸಮುದಾಯ ಬೇಸರಗೊಂಡಿದೆ.

ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ನಮಗೆ ಮೂಲ ಸೌಕರ್ಯಗಳನ್ನು ನೀಡುವುದಿಲ್ಲ. ಗುಜರಾತ್‍ನಲ್ಲಿ ವಾಸಿಸುತ್ತಿರುವ ಮುಸ್ಲಿಮ್ ಸಮುದಾಯದಲ್ಲಿ ಹೆಚ್ಚು ಅಶಿಕ್ಷಿತರಿದ್ದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಡತನದಿಂದ ಸಾಮಾಜಿಕವಾಗಿ ಮುಸ್ಲಿಮರು ಹಿಂದುಳಿದಿದ್ದಾರೆ. ಆದ್ರೆ ಇದ್ಯಾವುದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ನೀಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಅಲ್ಲಿನ ಕೆಲ ಯುವಕರು ಕಾಂಗ್ರೆಸ್‍ನಿಂದ ಉತ್ತಮ ಕೆಲಸಗಳನ್ನು ನಿರೀಕ್ಷಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಪಟ್ಟ ಏರಲಿರುವ ರಾಹುಲ್ ಗಾಂಧಿ ಮೇಲೆ ಭರವಸೆ ವ್ಯಕ್ತಪಡಿಸುತ್ತಿದ್ದು ಮನಮೋಹನ್ ಸಿಂಗ್ ಆಡಳಿತವನ್ನು ಶ್ಲಾಘಿಸುತ್ತಿದ್ದಾರೆ.

ಸೌರಾಷ್ಟ್ರದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ ಅಲ್ಲಿಯೂ ಮೋದಿ ಸರ್ಕಾರ ವಿರುದ್ಧ ಅಲೆ ಪ್ರಾರಂಭವಾಗಿದ್ದು, ಈಗೀನ ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳ ಬಗ್ಗೆ ತೃಪ್ತಿದಾಯಕವಾಗಿಲ್ಲ. ಸಾಮಾನ್ಯ ಮುಸ್ಲಿಮ್ ಸಮುದಾಯದ ವ್ಯಕ್ತಿಯ ಪ್ರಕಾರ, ಹಿಂದುತ್ವ ಹಾಗೂ ಅನಕ್ಷರತೆ ಗುಜರಾತ್ ಮುಸ್ಲಿಂ ಸಮುದಾಯದ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆಯಂತೆ. ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಬಿಜೆಪಿಯ ಶಾಸಕರು ಸಂಸದರು, ಪುರಸಭೆ ಸದಸ್ಯರು ಆಯ್ಕೆಯಾಗಿದ್ದರೂ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ ಎಂದು ಜನ ದೂರುತ್ತಿದ್ದಾರೆ.

 

 ಪೋರ್‌ಬಂದರ್ ನ ಬಂದರಿನಲ್ಲಿ ವ್ಯವಹಾರ ಮಾಡುವ ವ್ಯಾಪಾರಸ್ಥರು ಮೂಲ ಸೌಲಭ್ಯಗಳಿಲ್ಲ ಎಂದು ದೂರಿಡುತ್ತಿದ್ದಾರೆ. ಗುಜರಾತ್ ಬೇರೆ ಪ್ರದೇಶಗಳಲ್ಲಿ ಗಲಭೆಗಳು ಆದಾಗ ಈ ಪ್ರದೇಶ ಶಾಂತವಾಗಿತ್ತು. ಕೀರ್ತಿ ದೇವಸ್ಥಾನದ ಪಕ್ಕದಲ್ಲಿರುವ ಈ ಪ್ರದೇಶ ಹಿಂದೂ ಮುಸ್ಲಿಮ್ ಏಕತೆಯ ಸಂಕೇತವಾಗಿತ್ತು ಎನ್ನುತ್ತಾರೆ ಸ್ಥಳೀಯರು. ಆದ್ರೆ ಏಕತೆಯ ನ್ಯಾಯ ಮುಸ್ಲಿಮರಿಗೆ ಸಿಗುತ್ತಿಲ್ಲ. ತಾರತಮ್ಯ ಮಾಡಲಾಗುತ್ತಿದೆ ಎಂದು ಬಂದರಿನಲ್ಲಿ ಕೆಲಸ ಮಾಡುವ ಮುಸ್ಲಿಂ ಸಮುದಾಯದ ಜನರು ಹೇಳುತ್ತಿದ್ದಾರೆ.

ಇನ್ನೊಂದು ಪ್ರಮುಖ ಅಂಶ ಕೆಲವೇ ತಿಂಗಳ ಹಿಂದೆ ರಾಜಕೋಟ್‍ನ ಲೇಡಿ ಡಾನ್ ಎಂದು ಕರೆಸಿಕೊಳ್ಳುವ ಸೋಮು ದಂಗಾರ್ ಮುಸ್ಲಿಮರ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ಇವರಲ್ಲಿ ಅಸಮಾಧಾನವಿದೆ. ಅವರ ಕ್ರಮ ಕೈಗೊಳ್ಳದ ಹಿನ್ನಲೆ ಇವರು ಮತ್ತಷ್ಟು ಬಿಜೆಪಿ ಮೇಲೆ ಕೋಪಿಸಿಕೊಂಡಿದ್ದಾರೆ.

ಬಹುತೇಕ ಮುಸ್ಲಿಮರ ಅಭಿಪ್ರಾಯದಂತೆ ಉತ್ತಮ ಶಿಕ್ಷಣ ಸೌಲಭ್ಯಗಳಿಲ್ಲ, ಇರುವ ಶಿಕ್ಷಣ ಕಳಪೆ ಗುಣಮಟ್ಟದಾಗಿದೆ, ಶಿಕ್ಷಣ ದಾರಿ ತಪ್ಪಿದ್ದು ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತಿಲ್ಲ, ಶಿಕ್ಷಣ ಖಾಸಗೀಕರಣಗೊಳ್ಳುತ್ತಿದ್ದು ಬಹುತೇಕ ಕಾಲೇಜುಗಳು ಬಿಜೆಪಿ ಶಾಸಕರ ಒಡೆತನ ಹೊಂದಿದ್ದು ಖಾಸಗೀಕರಣದ ಲಾಭವನ್ನು ಬಿಜೆಪಿ ಶಾಸಕರು ಪಡೆಯುತ್ತಿದ್ದಾರೆ ಎಂದು ಪೋರ್‌ಬಂದರ್ ಮುಸ್ಲಿಮರು ಆರೋಪಿಸುತ್ತಿದ್ದಾರೆ.

ಸುಮಾರು 9% ರಷ್ಟು ಇರುವ ಮುಸ್ಲಿಮರು 25-30 ಸ್ಥಾನಗಳಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಬಹುತೇಕರು ಕಾಂಗ್ರೆಸ್ ನ್ನು ಬೆಂಬಲಿಸಿದರೆ ಇನ್ನೂ ಕೆಲ ಮುಸ್ಲಿಮರು ಬಿಜೆಪಿ ಬೆಂಬಲಿಸುವ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಪೋರ್‌ಬಂದರ್ ನಲ್ಲಿ ಸುಮಾರು 15 ಸಾವಿರ ಮುಸ್ಲಿಮರು ಈಗಲೂ ಕಾಂಗ್ರೆಸ್ ನ ಅರ್ಜುನ್ ಮೊಧ್ವಾಡಿಯಾ ಅವರನ್ನೇ ಬೆಂಬಲಿಸುತ್ತಿದ್ದಾರೆ. ಬಿಜೆಪಿಯ ತಂತ್ರಗಾರಿಗೆ ಇಲ್ಲಿ ಪ್ರಭಾವ ಬೀರುವುದಿಲ್ಲ, ಸಬ್ ಕೀ ಸಾಥ್ ಸಬ್ ಕೀ ವಿಕಾಸ್ ಬಗ್ಗೆ ಮಾತನಾಡುವ ಸರ್ಕಾರ ಮುಸ್ಲಿಮ್ ಸಮುದಾಯದ ಶಮನಕ್ಕೆ ಪ್ರಯತ್ನಿಸುತ್ತಿದೆ ಎನ್ನುವುದು ಸ್ಥಳಿಯರ ವಾದ.

ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಗುಜರಾತ್ ಮುಸ್ಲಿಮರ ಹಜ್ ಕೋಟಾ 15 ಸಾವಿರಕ್ಕೆ ಏರಿಕೆಯಾಗಿದೆ. ಮುಸ್ಲಿಮ್ ಸಮುದಾಯದ ಪ್ರಯೋಜನಕ್ಕಾಗಿ ಹಲವು ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಆದ್ರೆ ಪರಿಸ್ಥಿತಿ ನೋಡಿದರೆ ಬಿಜೆಪಿ ಬಗೆಗೆ ಗ್ರಹಿಕೆ ಬದಲಾಗಲು ಇನ್ನೂ ಸಮಯ ತೆಗೆದುಕೊಳ್ಳುವಂತೆ ಕಾಣುತ್ತಿದೆ.

ಬಿಜೆಪಿ ನಾಯಕರು ಹೇಳೋದು ಏನು?
ಉತ್ತರ ಪ್ರದೇಶ ಚುನಾವಣೆಯಲ್ಲಿ ತ್ರಿವಳಿ ತಲಾಖ್ ಬಹುಮುಖ್ಯ ಪಾತ್ರವಹಿಸಿತ್ತು. ಮುಸ್ಲಿಮ್ ಮಹಿಳೆಯರು ಬಹಿರಂಗವಾಗಿ ಬಿಜೆಪಿ ವಿರುದ್ಧ ಮಾತನಾಡದೇ ಇದ್ದರೂ ಮತದಾನದ ವೇಳೆ ಬಿಜೆಪಿಯನ್ನು ಬೆಂಬಲಿಸಿದ್ದರು. ಈ ಕಾರಣಕ್ಕೆ ಮುಸ್ಲಿಮರು ಹೆಚ್ಚಿದ್ದ ಕ್ಷೇತ್ರಗಳಲ್ಲೂ ಬಿಜೆಪಿಯ ಶಾಸಕರು ಗೆಲುವು ಕಂಡಿದ್ದರು. ಹೀಗಾಗಿ ಗುಜರಾತ್ ನಲ್ಲಿ ಮುಸ್ಲಿಮ್ ಮಹಿಳೆಯರು ನಮ್ಮನ್ನು ಕೈ ಹಿಡಿಯುತ್ತಾರೆ ಎನ್ನುವ ಆಶಾಭಾವವನ್ನು ಬಿಜೆಪಿ ನಾಯಕರು ಇಟ್ಟುಕೊಂಡಿದ್ದಾರೆ. ಹೀಗಾಗಿ ಉತ್ತರಪ್ರದೇಶದಲ್ಲಿ ಆದಂತೆ ಗುಜರಾತ್ ನಲ್ಲೂ ತ್ರಿವಳಿ ತಲಾಖ್ ವಿಚಾರ ಬಿಜೆಪಿಯನ್ನು ಗೆಲ್ಲಿಸುತ್ತಾ ಎನ್ನುವ ಪ್ರಶ್ನೆಗೆ ಡಿಸೆಂಬರ್ 18ರಂದು ಉತ್ತರ ಸಿಗಲಿದೆ.

Click to comment

Leave a Reply

Your email address will not be published. Required fields are marked *