LatestNational

22 ವರ್ಷಗಳನ್ನು ಆಳಿದ ಬಿಜೆಪಿ ಸರ್ಕಾರ ಸಾಧನೆ ಏನು: ರಾಹುಲ್ ಗಾಂಧಿ ಪ್ರಶ್ನೆ

ಅಹಮದಾಬಾದ್: ಕಳೆದ 22 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಜನತೆಗೆ ನೀಡಿರುವ ಭರವಸೆಗಳ ಬಗ್ಗೆ ಉತ್ತರ ನೀಡಬೇಕಿದೆ ಎಂದು ರಾಹುಲ್ ಗಾಂಧಿ ಆಗ್ರಹಿಸುವ ಮೂಲಕ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಅಂಗವಾಗಿ ನಡೆಯುತ್ತಿರುವ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ನಂತರ ವಿಸಾವದರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಬಿಜೆಪಿ ಸರ್ಕಾರದ ಸಾಧನೆಯನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

ಈ ಬಾರಿ ಗುಜರಾತ್ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಹುಲ್ ಗಾಂಧಿ ದಿನಕ್ಕೆ ಒಂದು ಪ್ರಶ್ನೆ ಕೇಳುವುದಾಗಿ ಹೇಳಿದ್ದು, ಇಂದು ಜನತೆಗೆ ಸರ್ಕಾರ ನೀಡಿದ ಮನೆ ನಿರ್ಮಿಸಿಕೊಡುವ ಯೋಜನೆ ಕುರಿತು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಅವರು ಗುಜರಾತಿನ ಜನತೆಗೆ 2012 ರಲ್ಲಿ 50 ಲಕ್ಷ ಮನೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ 5 ವರ್ಷಗಳ ಆಡಳಿತ ಅವಧಿಯಲ್ಲಿ ಕೇವಲ 4.72 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಂತೆ ಪ್ರಧಾನಿಗಳ ಭರವಸೆ ಈಡೇರಿಸಲು 45 ವರ್ಷಗಳು ಬೇಕಾಗುತ್ತದೆ ಎಂದು ಹೇಳಿ ವ್ಯಂಗ್ಯವಾಡಿದರು.

ರಾಹುಲ್ ಗಾಂಧಿ ಅವರು 2 ದಿನಗಳ ಕಾಲ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದು, ಎರಡು ದಿನಗಳ ಪ್ರಚಾರ ಅವಧಿಯಲ್ಲಿ ರಾಹುಲ್ ಗಾಂಧಿ ಗುಜರಾತ್‍ನ ಪ್ರಮುಖ ಮೂರು ಜಿಲ್ಲೆಗಳ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button