ಗಾಂಧಿನಗರ: ಕೆಲ ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಖಿನ್ನತೆಗೆ ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಅಂತಹದ್ದೇ ಪ್ರಕರಣ ಗುಜರಾತ್‌ನಲ್ಲಿ (Gujarat) ನಡೆದಿದೆ.
ಪತ್ನಿಯ ಕಿರುಕುಳದ ಬಗ್ಗೆ ವೀಡಿಯೋ ಮಾಡಿಟ್ಟು ಗುಜರಾತ್‌ನ 39 ವರ್ಷದ ವ್ಯಕ್ತಿ ಆತ್ಮಹತ್ಯೆ (Gujarat man Suicide) ಮಾಡಿಕೊಂಡಿದ್ದಾನೆ. ಅಲ್ಲದೇ ನನ್ನ ಪತ್ನಿಗೆ ತಕ್ಕ ಪಾಠ ಕಲಿಸಿ ಎಂದು ವೀಡಿಯೋದಲ್ಲಿ ಹೇಳಿದ್ದಾನೆಂದು ವರದಿಯಾಗಿದೆ. ವಿಡಿಯೋ ಆಧರಸಿ ಮಹಿಳೆ ವಿರುದ್ಧ ಗುಜರಾತ್‌ನ ಬೊಟಾಡ್ ಪೊಲೀಸರು (Gujarat’s Botad Police) ಮೃತನ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಕಳೆದ ಡಿಸೆಂಬರ್ 30ರಂದು ಬೋಟಾಡ್‌ನ ಜಮ್ರಾಲಾ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವ ಮನೆಯ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಮೃತನ ಕುಟುಂಬಸ್ಥರಿಗೆ ಆತನ ಮೊಬೈಲ್‌ನಲ್ಲಿದ್ದ ವಿಡಿಯೋ ರೆಕಾರ್ಡಿಂಗ್ ಸಿಕ್ಕಿತ್ತು. ಈ ವೀಡಿಯೋನಲ್ಲಿ ಮೃತನು, ನನ್ನ ಸಾವಿಗೆ ಕಾರಣವಾದ ನನ್ನ ಹೆಂಡತಿಗೆ ತಕ್ಕ ಪಾಠ ಕಲಿಸಿ ಎಂದೂ ಹೇಳಿಕೊಂಡಿದ್ದಾನೆ. ಮಹಿಳೆ ತನ್ನ ಪತಿಗೆ ಮಾನಸಿಕ ಕಿರುಕುಳ ನೀಡಿದ್ದಾಳೆ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುವಂತೆ ಮಾಡಿರುವ ಬಗ್ಗೆಯೂ ಆತ ಹೇಳಿಕೊಂಡಿದ್ದಾನೆಂದು ಬೋಟಾಡ್ ಗ್ರಾಮಾಂತರ ಠಾಣೆ ಪೊಲೀಸರು ವಿವರಿಸಿದ್ದಾರೆ.
Advertisement
ಎಫ್‌ಐಆರ್ ಪ್ರಕಾರ, ಮೃತ ವ್ಯಕ್ತಿಯು ಸಾಯುವುದಕ್ಕೂ ಮುನ್ನ ತನ್ನ ಹೆಂಡತಿಯನ್ನ ಸಮಾಧಾನಪಡಿಸಿ ಮನೆಗೆ ಕರೆದುಕೊಂಡು ಬರಲು ಹೋಗಿದ್ದನು. ಆದ್ರೆ ಆಕೆ ಬರಲು ನಿರಾಕರಿಸಿದ್ದಾಳೆ. ಬಳಿಕ ಪತಿ ವೀಡಿಯೋ ಮಾಡಿಟ್ಟು, ಆತ್ಮಹತ್ಯೆಗೆ ಮುಂದಾಗಿದ್ದಾನೆ. ವೀಡಿಯೋನಲ್ಲಿ ತನ್ನ ಹೆಂಡತಿ ಮತ್ತು ಅತ್ತೆ ಚಿತ್ರಹಿಂಸೆ ನೀಡಿರುವುದಾಗಿ ಹೇಳಿಕೊಂಡಿದ್ದಾನೆ.
Advertisement
ಮೃತನ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.