ಅಹಮದಾಬಾದ್: ವ್ಯಕ್ತಿಯೊಬ್ಬ ಪೊಲೀಸ್ ಕಾಂಟ್ರೋಲ್ ರೂಮ್ ಗೆ ಸುಮಾರು 1,264 ಬಾರಿ ಕರೆ ಮಾಡಿ ನಿಂದಿಸಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.
ಈಶ್ವರ್ ಭೋಯ್(40) ಎಂಬಾತ ಈ ಕೃತ್ಯವೆಸಗಿದ್ದಾನೆ. ಭೂವಿವಾದವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಈತನನ್ನು ಹೊಡೆದಿದ್ದರಿಂದ ಅವರ ಮೇಲೆ ಸೇಡು ಹೊಂದಿದ್ದ. ಮೂರು ವರ್ಷಗಳ ಹಿಂದೆ ಸೆಕ್ಯೂರಿಟಿ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದ ಈಶ್ವರ್, 108 ತುರ್ತು ಸೇವೆಯ ನಂಬರ್‍ಗೆ ಕರೆ ಮಾಡಿ ನಿಂದಿಸುವ ಮೂಲಕ ವಿಕೃತ ಆನಂದ ಪಡೆಯುತ್ತಿದ್ದ. ಆಗ ಈಶ್ವರ್ ನನ್ನು ಪೊಲೀಸರು ಬಂಧಿಸಿದ್ದರು.
Advertisement
Advertisement
ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಆರೋಪಿ ಈಶ್ವರ್, ಬಳಿಕ ಪೊಲೀಸ್ ಕಾಂಟ್ರೋಲ್ ರೂಮ್ ಗೆ ಫೋನ್ ಮಾಡಿ ನಿಂದಿಸಲು ಆರಂಭಿಸಿದ್ದ. ಈ ವೇಳೆ ಕಾಂಟ್ರೋಲ್ ರೂಮ್ ನ ಮಹಿಳಾ ಸಿಬ್ಬಂದಿ ಕರೆ ಸ್ವೀಕರಿಸಿದರೆ ಆರೋಪಿ ಮತ್ತಷ್ಟು ಜೋರಾಗಿ ನಿಂದಿಲು ಆರಂಭಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ಮಹಿಳಾ ಪೊಲೀಸ್ ಸಿಬ್ಬಂದಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
Advertisement
ಸೈಬರ್ ಕ್ರೈಂ ವಿಭಾಗದ ಪೊಲೀಸರ ಸಹಾಯ ಪಡೆದ ಅಧಿಕಾರಿಗಳು ಮೊಬೈಲ್ ನ ಐಎಂಇಐ ನಂಬರ್ ನಿಂದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ಈಶ್ವರ್ ಗೆ ಈಗಾಗಲೇ ಮದುವೆಯಾಗಿದ್ದು ಹೆಂಡತಿ ಬಿಟ್ಟು ಹೋಗಿದ್ದಾಳೆ. ಈತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.