ಲಕ್ನೋ: ಪಾಕಿಸ್ತಾನದ (Pakistan) ಐಎಸ್‌ಐ (ISI) ಏಜೆಂಟ್‌ಗಳೊಂದಿಗೆ ಸೇರಿ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಗುಜರಾತ್‌ನ (Gujarat) ವ್ಯಕ್ತಿಯೊಬ್ಬನನ್ನು ಇಲ್ಲಿನ ವಿಶೇಷ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.
ರಾಜಕ್‌ಭಾಯ್ ಕುಂಬಾರ್ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ. ಈತ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಬೆಂಬಲಿತ ಐಎಸ್‌ಐ ಏಜೆಂಟ್‌ಗಳೊಂದಿಗೆ ಸಂಚು ರೂಪಿಸಿದ್ದ. ಈ ತನ ವಿರುದ್ಧ 2020 ರಲ್ಲಿ ಎನ್‌ಐಎ ಪ್ರಕರಣ ದಾಖಲಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ಎನ್‌ಐಎ ನ್ಯಾಯಾಲಯವು 6 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.
ಈ ಪ್ರಕರಣದ ಮೊದಲನೇ ಅಪರಾಧಿ ಉತ್ತರ ಪ್ರದೇಶದ ರಶೀದ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯವು ಈಗಾಗಲೇ ಶಿಕ್ಷೆ ವಿಧಿಸಿತ್ತು. ಇಬ್ಬರೂ ಸೇರಿ ಪಾಕಿಸ್ತಾನಿ ಏಜೆಂಟ್‌ಗಳಿಗೆ ಭಾರತದಲ್ಲಿನ ಸೂಕ್ಷ್ಮ, ಯುದ್ಧತಂತ್ರದ ಮತ್ತು ಆಯಕಟ್ಟಿನ ಪ್ರಮುಖ ಸ್ಥಳಗಳ ಮಾಹಿತಿ ಕೊಟ್ಟಿದ್ದರು. ಅಲ್ಲದೇ ಭಾರತೀಯ ಸೇನೆಯ ಚಲನವಲನಗಳ ಫೋಟೋಗಳನ್ನು ಒದಗಿಸಿದ್ದರು ಎಂದು ಎನ್‌ಐಎ ಆರೋಪಿಸಿತ್ತು. ಈ ಛಾಯಾಚಿತ್ರಗಳನ್ನು ಅವರ ಮೊಬೈಲ್ ಫೋನ್ ಬಳಸಿ ತೆಗೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಶೀದ್ ಐಎಸ್‌ಐ ಏಜೆಂಟ್‌ಗಳಿಗೆ ಕಳುಹಿಸಿದ್ದ ಸೂಕ್ಷ್ಮ ಛಾಯಾಚಿತ್ರಗಳಿಗೆ ಕುಂಬಾರ್ ಹಣ ಒದಗಿಸಿದ್ದ. ಅಲ್ಲದೇ ಇಬ್ಬರೂ ಸೇರಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಳೆ ಬಯಲಿಗೆ ಬಂದಿತ್ತು.
ಏಪ್ರಿಲ್ 2020 ರಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಎನ್‌ಐಎ, ಜುಲೈ 2020 ರಲ್ಲಿ ರಶೀದ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಫೆಬ್ರವರಿ 2021 ರಲ್ಲಿ ಕುಂಬಾರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.