ಗಾಂಧೀನಗರ: ಏಳನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನಿಸುತ್ತಿರುವ ಬಿಜೆಪಿ (BJP), ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಬಾರಿ ಲೆಕ್ಕಾಚಾರ ಹಾಕಿದೆ. ಇತ್ತೀಚೆಗೆ ಪ್ರಕಟಗೊಂಡ 160 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಲ್ಲಿ ಯುವಕರಿಗೆ ಆದ್ಯತೆ ನೀಡುವ ಮೂಲಕ ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದೆ.
Advertisement
182 ವಿಧಾನಸಭೆ ಕ್ಷೇತ್ರಗಳಲ್ಲಿ (Assembly Constituency) 160 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಪ್ರಕಟಗೊಂಡಿದ್ದು, ಇದರಲ್ಲಿ 11 ಮಂದಿ ಅಭ್ಯರ್ಥಿಗಳು 40 ವರ್ಷದೊಳಗೆ, 53 ಅಭ್ಯರ್ಥಿಗಳು 50 ವರ್ಷದೊಳಗಿನವರಾಗಿದ್ದಾರೆ. 2017ರ ಚುನಾವಣೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಿದ್ದು, ಕಳೆದ ಬಾರಿ 60 ವರ್ಷ ಚುನಾವಣೆಗೆ ವಯಸ್ಸಿನ ಮಾನದಂಡ ಇಡಲಾಗಿತ್ತು.
Advertisement
Advertisement
ಆಡಳಿತ ವಿರೋಧಿ ಅಲೆಯನ್ನು ತಡೆಯಲು, ಶಾಸಕರ ಮೇಲಿನ ಅಸಮಾಧಾನದಿಂದ ಪಕ್ಷಕ್ಕೆ ಡ್ಯಾಮೇಜ್ ಆಗದ ಹಾಗೇ ನೋಡಿಕೊಳ್ಳುವ ದೃಷ್ಟಿಯಿಂದ ಯುವಕರಿಗೆ ಆದ್ಯತೆ ನೀಡಲಾಗುತ್ತಿದ್ದು, ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಚುನಾವಣೆಯಿಂದ ಹಿಂದೆ ಸರಿಯುವಂತೆ ಮಾಡಿದೆ. ಈ ಬಾರಿಯ ಚುನಾವಣೆ ಬಿಜೆಪಿ, ಕಾಂಗ್ರೆಸ್ ಮತ್ತು ಆಪ್ ನಡುವೆ ತ್ರಿಕೋನ ಸ್ಪರ್ಧೆಯಾಗಿದ್ದು, ಆಪ್ ಬಿಜೆಪಿ ಬಲಿಷ್ಠವಾಗಿರುವ ನಗರ ಪ್ರದೇಶಗಳಲ್ಲಿ ಯುವ ಮುಖಗಳಿಗೆ ಆದ್ಯತೆ ನೀಡುತ್ತಿದೆ. ಈ ಹಿನ್ನೆಲೆ ಬಿಜೆಪಿ ಕೂಡಾ ತನ್ನ ತಂತ್ರ ಬದಲಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.
Advertisement
ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ ನಂತಹ ಯುವ ಮತ್ತು ಸಮುದಾಯ ನಾಯಕರನ್ನು ಬಳಸಿಕೊಂಡು ಜಾತಿ ಸಮೀಕರಣದಲ್ಲೂ ಬಿಜೆಪಿ ಮತ ಗಳಿಸಲು ತಂತ್ರರೂಪಿಸಿದೆ. ಘೋಷಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ 49 ಒಬಿಸಿ ಮುಖಗಳಿದ್ದು, 17 ಕೋಲಿ ಮತ್ತು 14 ಠಾಕೋರ್‍ಗಳಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯಿಂದ 40 ಪಟೇಲ್ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕಿಳಿದಿದ್ದು, 23 ಲೆಯುವಾ ಪಟೇಲ್ ಮತ್ತು 17 ಕಡ್ವಾ ಪಟೇಲ್‍ಗಳು ಕಣಕ್ಕಿಳಿದಿದ್ದಾರೆ. 37 ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು, 14 ಮಹಿಳಾ ಅಭ್ಯರ್ಥಿಗಳು ಮತ್ತು 17 ಕ್ಷತ್ರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.
ಆಡಳಿತವನ್ನು ಸುಧಾರಿಸಲು ಮತ್ತು ಯುವಕರಿಗೆ ಬಲವಾದ ಸಂದೇಶವನ್ನು ನೀಡಲು ಆಡಳಿತ ಪಕ್ಷವು ವಿದ್ಯಾವಂತ ವರ್ಗಕ್ಕೆ ಪ್ರಾಮುಖ್ಯತೆಯನ್ನು ನೀಡಿದೆ. ಬಿಜೆಪಿಯ ಅಭ್ಯರ್ಥಿಗಳ ಪೈಕಿ, 13 LLB, 1 LLM, 4 ವೈದ್ಯರು, 4 PHD, 11 ಇಂಜಿನಿಯರ್, 6 ಶಿಕ್ಷಕರು ಮತ್ತು 2 MBA ಪದವೀಧರರು ಒಳಗೊಂಡಿದ್ದಾರೆ.
ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 89 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ 93 ಸ್ಥಾನಗಳಿಗೆ ಮತದಾನ ನಡೆಯಲಿದೆ. 182 ಸದಸ್ಯರ ರಾಜ್ಯ ಅಸೆಂಬ್ಲಿಯ ಅವಧಿಯು 2023ರ ಫೆಬ್ರವರಿ 18 ರಂದು ಅಂತ್ಯವಾಗಲಿದೆ.