ಕೆ.ಪಿ.ನಾಗರಾಜ್, ವಿಶೇಷ ಪ್ರತಿನಿಧಿ
ಅಹಮದಾಬಾದ್: ಗುಜರಾತ್ ರಾಜಧಾನಿ ಗಾಂಧಿನಗರದಿಂದ ಸುಮಾರು 130 ಕಿ.ಮೀ. ದೂರ ಇರುವ ಗೋಧ್ರಾ ಈ ದೇಶದಲ್ಲೇ ಅತಿ ಸೂಕ್ಷ್ಮ ಪ್ರದೇಶ. 2002ರ ಫೆಬ್ರವರಿ 27ರ ಬೆಳಗ್ಗಿನ ಜಾವ 8.30ಕ್ಕಿಂತಾ ಮುಂಚೆ ಇಂಥದ್ದೊಂದು ಪ್ರದೇಶ ಇದೆ ಎಂದು ದೇಶದ ಜನರಿಗೆ ಗೊತ್ತಿರಲಿಲ್ಲ. ದೇಶದ ಜನರಿಗೇಕೆ ಗುಜರಾತ್ ಎಂಬ ರಾಜ್ಯದ ಜನರಿಗೂ ಕೂಡಾ ಗೋಧ್ರಾ ಬಗ್ಗೆ ಅರಿವು ಇರಲಿಲ್ಲ. ಅಷ್ಟರ ಮಟ್ಟಿಗೆ ಈ ಪ್ರದೇಶ ಎಲೆ ಮರೆ ಕಾಯಿಯಂತೆ ಇತ್ತು.
ಬೆಳಕಿಗೆ ಬಂದ ಗೋಧ್ರಾ: ಅವತ್ತು 2002ರ ಫೆಬ್ರವರಿ 27ರ ಬೆಳಗ್ಗೆ 8.30. ಅಯೋಧ್ಯೆಗೆ ತೆರಳಿದ್ದ ಹಿಂದೂ ಕರಸೇವಕರು ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬರುತ್ತಿದ್ದರು. ರೈಲು ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ನಿಂತಿತ್ತು. ರೈಲಿನ ಎಸ್ 6 ಬೋಗಿಯ ಮೇಲೆ ಏಕಾಏಕಿ ಬೆಂಕಿ ಉಂಡೆಗಳ ದಾಳಿಯಾಯಿತು. 56 ಜನ ಕರಸೇವಕರು ಕ್ಷಣಾರ್ಧದಲ್ಲಿ ಸಜೀವವಾಗಿ ದಹನವಾದರು. ಇಡೀ ದೇಶಕ್ಕೆ ಈ ಸುದ್ದಿ ಕಾಳ್ಗಿಚಿನಂತೆ ಹಬ್ಬಿ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿತ್ತು.
Advertisement
Advertisement
ರೈಲಿನ ಇತರ ಬೋಗಿಗಳಲ್ಲಿ ಇದ್ದ ಕರಸೇವಕರು ತಮ್ಮ ಬೋಗಿಯಿಂದ ಹೊರ ಬಂದು ಏನಾಗುತ್ತಿದೆ ಎಂದು ನೋಡುವುದರೊಳಗೆ 56 ಜನ ಸಜೀವವಾಗಿ ದಹನಗೊಂಡಿದ್ದರು. ಯಾರು ಬೆಂಕಿ ಹಚ್ಚಿದ್ದು ಎಂಬ ಪ್ರಶ್ನೆಗೆ ತನಿಖೆಯೇ ಇಲ್ಲದೆ ಉತ್ತರವನ್ನು ಸ್ಪಷ್ಟ ಮಾಡಿಕೊಳ್ಳಲಾಗಿತ್ತು. ಪರಿಣಾಮ, ದೇಶದ ಹಲವೆಡೆ ಕೋಮು ಗಲಭೆಗಳು ನಡೆದವು. ನೂರಾರು ಜನರು ಪ್ರಾಣ ಬಿಟ್ಟರು. ದೇಶದಲ್ಲಿ ಹಿಂದೂ ಮುಸ್ಲಿಮರು ಒಟ್ಟಾಗಿ ಬದುಕಲು ಸಾಧ್ಯವೇ ಇಲ್ಲ ಎಂಬ ಮಟ್ಟಿಗೆ ವಾತಾವರಣ ಕೆಟ್ಟು ಹೋಯಿತು.
Advertisement
ಈಗಲೂ ಇದೆ ಅದೇ ಬೋಗಿ!: ಇದೇ ಸಬರಮತಿ ರೈಲಿನ ಇನ್ನೊಂದು ಬೋಗಿಯಲ್ಲಿದ್ದ ಕರಸೇವಕರ ಕಣ್ಣಿನಲ್ಲಿ ಘಟನೆ ನಡೆದು 15 ವರ್ಷ ಕಳೆದರೂ ಬೆಂಕಿಯ ಕ್ಷಣಗಳು ಹಾಗೇ ಇವೆ. ಗೋಧ್ರಾ ಹತ್ಯಾಕಾಂಡ ನಡೆದು 15 ವರ್ಷ ಕಳೆದಿವೆ. ಈಗಲೂ ಘಟನೆಯ ತನಿಖೆ ನಡೆಯುತ್ತಿದೆ. ಈ ಕಾರಣ ಅವತ್ತು ಬೆಂಕಿಗೆ ಆಹುತಿಯಾದ ಸಬರಮತಿ ರೈಲಿನ ಎಸ್6 ಕೋಚ್ ಅನ್ನು ಇನ್ನೂ ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಇಡಲಾಗಿದೆ. ಬೋಗಿಗೆ ತುಕ್ಕ ಹಿಡಿದಿದ್ದರೂ ಸುಟ್ಟು ಕರಕಲಾಗಿರುವ ಒಳ ಹೊರಗಿನ ಬಿಡಿ ಭಾಗಗಳು ದುರಂತದ ಕರಾಳ ಅಧ್ಯಾಯವನ್ನು ಬಿಚ್ಚಿಡುತ್ತಿದೆ. ಸಾರ್ವಜನಿಕರ ವೀಕ್ಷಣೆಗೆ ಹಾಗೂ ಮಾಧ್ಯಮದವರು ಅದನ್ನು ಚಿತ್ರೀಕರಿಸುವುದಕ್ಕೆ ಅವಕಾಶ ಇಲ್ಲ. ಈ ಬೋಗಿಯನ್ನು ನೋಡಿಕೊಳ್ಳಲೆಂದು ಪೊಲೀಸರ ನಿಯೋಜನೆ ಆಗಿದೆ.
Advertisement
ಗೋಧ್ರಾ ಹತ್ಯಾಕಾಂಡ ನಡೆಯುವವರೆಗೂ ನರೇಂದ್ರ ಮೋದಿ ಒಬ್ಬ ಸಾಮಾನ್ಯ ಜನ ನಾಯಕ. ಜಾತಿಯ ಬಲವಿಲ್ಲದೆ ಬೆಳೆದು ನಿಂತು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಮನುಷ್ಯ ಎಂಬ ಹೆಗ್ಗಳಿಕೆಗೆ ಮಾತ್ರ ಪಾತ್ರವಾಗಿದ್ದರು. ಆದರೆ, ಈ ಘಟನೆ ಗುಜರಾತ್ ರಾಜಕಾರಣದ ಮಗ್ಗಲು ಬದಲಾಯಿಸಿ ಬಿಟ್ಟಿತ್ತು. ಒಬ್ಬ ಸಾಮಾನ್ಯ ನಾಯಕನನ್ನು ಹಿಂದೂ ಸಾಮ್ರಾಜ್ಯದ ಸಾಮ್ರಾಟ್ ಎಂಬ ರೀತಿ ಮಾಡಿಬಿಟ್ಟಿತ್ತು.
ಒಡೆದ ಮನ ಒಂದುಗೂಡಲಿಲ್ಲ: ಗುಜರಾತ್ ರಾಜ್ಯದ ಪಂಚಮಹಲ್ ಜಿಲ್ಲೆಯಲ್ಲಿ ಗೋಧ್ರಾ ಸೇರಿ ಸೇರಾ, ಮೆರ್ವಾಹಧಾಪ್, ಕಾಲೋಲ್ ಹಾಗೂ ಹಾಲೋಲ್ ಎಂಬ ಐದು ವಿಧಾನಸಭಾ ಕ್ಷೇತ್ರಗಳಿವೆ. ಗೋಧ್ರಾದಲ್ಲಿ ಒಟ್ಟು ಮೂರೂವರೆ ಲಕ್ಷ ಜನರು ಇದ್ದಾರೆ. ಇದರಲ್ಲಿ 52% ರಷ್ಟು ಮುಸ್ಲಿಮರು ಮತ್ತು 48% ರಷ್ಟು ಹಿಂದೂಗಳಿದ್ದಾರೆ. ಹೀಗಾಗಿ, ಗೋಧ್ರಾದಲ್ಲಿ ಮುಸ್ಲಿಮರ ಪ್ರಾಬಲ್ಯ ದೊಡ್ಡದಿದೆ. ಎರಡು ಕೋಮಿನ ಜನರು ಈ ಕಾರಣಕ್ಕೆ ಇಲ್ಲಿ ಜಿದ್ದಾಜಿದ್ದಿನ ಬದುಕನ್ನು ಸದಾ ನಡೆಸುತ್ತಿದ್ದಾರೆ. ಇಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದೂ ಮುಸ್ಲಿಮರು ಸೌಹಾರ್ದವಾಗಿ ಬದುಕಿದ ಉದಾಹರಣೆಗಳು ಕೊಂಚ ಕಡಿಮೆ ಇವೆ. ಅದರಲ್ಲೂ ಗೋಧ್ರಾ ಹತ್ಯಾಕಾಂಡ ನಡೆದ ಮೇಲಂತೂ ಗೋಧ್ರಾದ ಒಳಗೆ ಎರಡು ಗಡಿಗಳು ಸೃಷ್ಟಿಯಾಗಿವೆ. ಒಂದೇ ನೆಲದಲ್ಲಿ ಇದ್ದರು ಪರಸ್ಪರ ವಿರುದ್ಧವಾಗಿಯೇ ಬದುಕುತ್ತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಹಿಂದೂಗಳು ಇರುವ ಏರಿಯಾಕ್ಕೆ ಮುಸ್ಲಿಮರು ಹೋಗುವುದಿಲ್ಲ. ಮುಸ್ಲಿಮರು ಇರುವ ಏರಿಯಾಕ್ಕೆ ಹಿಂದೂಗಳು ಹೋಗುವುದಿಲ್ಲ. ಇದು ಅಚ್ಚರಿ ಎನ್ನಿಸಿದರೂ ವಾಸ್ತವ.
12 ವರ್ಷದಿಂದ ಬಿಜೆಪಿ ಗೆದ್ದಿಲ್ಲ, ಆದರೆ ಈ ಬಾರಿ ‘ಕೈ’ ಶಾಸಕನೇ ಬಿಜೆಪಿಯಲ್ಲಿ!: ಗೋಧ್ರಾ ಹತ್ಯೆ ನಡೆದ ವೇಳೆ 2002 ರಲ್ಲಿ ಇಲ್ಲಿನ ಮತದಾರರು ಬಿಜೆಪಿ ಗೆಲ್ಲಿಸಿದ್ದರು. ಆದರೆ 2005ರಿಂದ ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಠಾಕೂರ್ ಸಮುದಾಯದ ಸಿ.ಕೆ.ರಾಹುಲ್ ಇಲ್ಲಿ ನಿರಂತರವಾಗಿ ಕಾಂಗ್ರೆಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಹೆಚ್ಚು ಕಡಿಮೆ ಗೋಧ್ರಾ ಬಿಜೆಪಿ ಪಾಲಿಗೆ 12 ವರ್ಷದಿಂದ ವನವಾಸದ ರೀತಿ ಮಾರ್ಪಟ್ಟಿದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್‍ನಿಂದ ನಿರಂತರವಾಗಿ ಗೆದ್ದು ಬರುತ್ತಿದ್ದ ಸಿ.ಕೆ.ರಾಹುಲ್ ಈಗ ಬಿಜೆಪಿ ಸೇರಿದ್ದಾರೆ. ಬಿಜೆಪಿಯಿಂದ ಕಣಕ್ಕೆ ಕೂಡ ಇಳಿಯಲಿದ್ದಾರೆ. ಇದು ಈಗ ನಿಜಕ್ಕೂ ಕಾಂಗ್ರೆಸ್ ನಿದ್ದೆ ಕೆಡಿಸಿದೆ. ಆದರೆ, ಕಾಂಗ್ರೆಸ್ ಇನ್ನೂ ಆಶಾಭಾವನೆಯಲ್ಲಿದೆ. ಇದಕ್ಕೆ ಕಾರಣ ಠಾಕೂರ್ ಸಮುದಾಯದ ಯುವ ನಾಯಕ ಅಲ್ಪೇಶ್ ಠಾಕೂರ್. ಗೋಧ್ರಾದ 48% ರಷ್ಟು ಹಿಂದುಗಳಲ್ಲಿ ಒಬಿಸಿಗಳ ಪಾಲು ಹೆಚ್ಚಿದೆ. ಅದರಲ್ಲಿ 70% ರಷ್ಟು ಹಿಂದುಳಿದ ಬಾರ್ಯ ಮತಗಳಿವೆ. ಈ ಮತಗಳನ್ನು ಸೆಳೆಯುವ ಶಕ್ತಿ ಅಲ್ಪೇಶ್ ಠಾಕೂರ್ ಗೆ ಇದೆ ಎಂದು ಕಾಂಗ್ರೆಸ್ ನಂಬಿ ಗೆಲುವಿನ ಲೆಕ್ಕ ಮಾಡಿದೆ.
ಗೋಧ್ರಾ ಹತ್ಯಾಕಾಂಡದ ವಿಚಾರ ಹಿಡಿದುಕೊಂಡು ಹಿಂದುತ್ವದ ಹೆಸರಿನಲ್ಲಿ ದೇಶದ ಬಹುತೇಕ ಕ್ಷೇತ್ರಗಳಲ್ಲಿ ಮತಗಳನ್ನು ಬಿಜೆಪಿ ಕ್ರೋಢೀಕರಿಸಿ ಗೆದ್ದಿದೆ. ಆದರೆ, ಅದೇ ಗೋಧ್ರಾದಲ್ಲಿ ಬಿಜೆಪಿಗೆ ಹಿಂದುತ್ವದ ಹೆಸರಿನಲ್ಲಿ ಮತಗಳನ್ನು ಒಟ್ಟು ಮಾಡಲು ಆಗುತ್ತಿಲ್ಲ. ಹಿಂದೂಗಳ 48% ರಷ್ಟು ಮತಗಳಲ್ಲಿ ವಿಭಜನೆ ಹೆಚ್ಚಿದೆ. ಆದರೆ ಮುಸ್ಲಿಂ ಮತಗಳ ನಿಷ್ಠೆ ಒಂದು ಪಕ್ಷದ ಪರವಾಗಿದೆ. ಇದು ಇಲ್ಲಿ ಕಾಂಗ್ರೆಸ್ ಶಕ್ತಿಯಾಗಿತ್ತು. ಆದರೆ ಕಳೆದ 12 ವರ್ಷದಿಂದ ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದ ಶಾಸಕರೇ ಈಗ ಬಿಜೆಪಿಗೆ ಬಂದಿರುವುದರಿಂದ ಇಲ್ಲಿ ಕಮಲ ಅರಳುತ್ತಾ, ಇಲ್ಲ ಜನ ಕೈ ಹಿಡಿಯುತ್ತಾರಾ ಎಂದು ತಿಳಿದುಕೊಳ್ಳಲು ಎಲ್ಲರೂ ಚುನಾವಣಾ ಫಲಿತಾಂಶದ ದಿನವಾದ ಡಿಸೆಂಬರ್ 18ರವರೆಗೆ ಕಾಯಲೇಬೇಕು.( ಗುಜರಾತ್ ಚುನಾವಣೆಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಗುಜರಾತ್ ಚುನಾವಣೆ)