ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ (Gujarat Assembly Election) ಬೆನ್ನಲ್ಲೇ ಕರ್ನಾಟಕದ (Karnataka) ಮೇಲೆ ಗಮನ ಹರಿಸಿರುವ ಬಿಜೆಪಿ (BJP) ಹೈಕಮಾಂಡ್ ರಾಜ್ಯದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ (Nalinkumar Kateel) ಸೂಚಿಸಿದೆ. ಇದಲ್ಲದೇ ಪ್ರಧಾನಿ ನರೇಂದ್ರ ಮೋದಿ (Narendra Modi) ತಿಂಗಳಿಗೆ ಒಮ್ಮೆ ಕರ್ನಾಟಕ ಭೇಟಿಗೆ ನಿರ್ಧರಿಸಿದ್ದು, ಕೇಂದ್ರ ಸಚಿವರು ನಿರಂತರ ಭೇಟಿಗೆ ತಿರ್ಮಾನಿಸಿದ್ದಾರೆ.
ಸೋಮವಾರ ದೆಹಲಿಯ ಕೇಂದ್ರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಪ್ರಮುಖ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda), ಕರ್ನಾಟಕ ನಮ್ಮ ಮುಂದಿನ ಗುರಿ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ನರೇಂದ್ರ ಮೋದಿ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್
ಸಭೆಯಲ್ಲಿ 2023ರಲ್ಲಿ ಬರುವ ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ತ್ರಿಪುರ ಸೇರಿ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ವಿಶೇಷವಾಗಿ ಕರ್ನಾಟಕ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಬೂತ್ ಮಟ್ಟದ ಸಂಘಟನೆ ಮತ್ತು ಬೃಹತ್ ರ‍್ಯಾಲಿಗಳನ್ನು ಆಯೋಜಿಸಲು ಹೈಕಮಾಂಡ್ ಹಿರಿಯ ನಾಯಕರಿಗೆ ಜವಾಬ್ದಾರಿ ನೀಡಿದೆ. ಚಳಿಗಾಲದ ಸಂಸತ್ ಅಧಿವೇಶನದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಲಿದ್ದು, ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ. 2019ರಲ್ಲಿ ಬಿಜೆಪಿ ಸೋತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ವಹಿಸಲಾಗಿದೆ. ಅವರು ಎಂಟು ವಿಧಾನಸಭಾ ಕ್ಷೇತ್ರಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಕೇಂದ್ರ ಇಂಧನ ಸಚಿವ ಕೃಷ್ಣ ಪಾಲ್ ಗುರ್ಜರ್ ಹಾಸನ ಮತ್ತು ಮಂಡ್ಯ ಲೋಕಸಭಾ ಸ್ಥಾನಗಳು ಮತ್ತು ಈ ಜಿಲ್ಲೆಗಳ ವಿಧಾನಸಭಾ ಸ್ಥಾನಗಳ ಜವಾಬ್ದಾರಿಯನ್ನು ನೀಡಲಾಗಿದೆ. ಇದನ್ನೂ ಓದಿ: ಕರಾವಳಿಯಲ್ಲಿ ಧರ್ಮದಂಗಲ್: ದೇವಸ್ಥಾನದ ಉತ್ಸವ, ಕಂಬಳ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ
ದಲಿತರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ನಾಲ್ಕು ಬೃಹತ್ ಸಮುದಾಯ ರ‍್ಯಾಲಿಗಳನ್ನು ಆಯೋಜಿಸಲು ಚಿಂತಿಸಿದ್ದು, ಇದರಲ್ಲಿ ನರೇಂದ್ರ ಮೋದಿ ಅವರು ಕನಿಷ್ಠ ಎರಡರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.