ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಮಾಹಿತಿ

Public TV
4 Min Read
AhmedabadStadium Main

– ಟ್ರಂಪ್ ಸಮ್ಮುಖದಲ್ಲಿ ಅಹಮದಾಬಾದ್ ಸ್ಟೇಡಿಯಂ ಉದ್ಘಾಟನೆ

ಗಾಂಧಿನಗರ: ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ಪ್ರತಿಮೆಯಿಂದ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದ ಗುಜರಾತ್ ಇದೀಗ ಕ್ರಿಕೆಟ್ ಸ್ಟೇಡಿಯಂ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಗುಜರಾತ್‍ನ ಅಹಮದಾಬಾದ್‍ದಿಂದ ಸ್ವಲ್ಪ ದೂರದ ಮೊಟೆರಾದಲ್ಲಿರುವ ಸರ್ದಾರ್ ಪಟೇಲ್ ಕ್ರೀಡಾಂಗಣ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿ ಹೊರ ಹೊಮ್ಮಲಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಫೆಬ್ರವರಿ 24ರಂದು ಸರ್ದಾರ್ ಪಟೇಲ್ ಸ್ಟೇಡಿಯಂ ಉದ್ಘಾಟನೆಯಾಗಲಿದೆ. ಜೊತೆಗೆ ಇಲ್ಲಿಯೇ ಟ್ರಂಪ್ ಅವರು ಸಾರ್ಜಜನಿಕ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರುವ ಸಾಧ್ಯತೆ ಇದೆ.

Trump Modi

ಸ್ಟೇಡಿಯಂ ವಿಶೇಷತೆ:
ಅಹಮದಾಬಾದ್ ಸ್ಟೇಡಿಯಂನಲ್ಲಿ 1982ರಿಂದ 2015ರ ವರೆಗೂ 49,000 ಆಸನಗಳ ವ್ಯವಸ್ಥೆ ಇತ್ತು. 2016ರ ಡಿಸೆಂಬರ್ ನಿಂದ ಕಾಮಗಾರಿ ಆರಂಭಗೊಂಡು ಸುಮರು 700 ಕೋಟಿ ರೂ. ವೆಚ್ಚದಲ್ಲಿ ಎಲ್ ಆಂಡ್ ಟಿ ಕಂಪನಿ ಗುತ್ತಿಗೆ ಪಡೆದು ಸ್ಟೇಡಿಯಂ ನಿರ್ಮಿಸಿದೆ. 1.10 ಲಕ್ಷ ಆಸನಗಳ ವ್ಯವಸ್ಥೆ ಕಲ್ಪಿಸುವ ಮೂಲಕ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಇರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ಮೆಲ್ಬರ್ನ್ ಸ್ಟೇಡಿಯಂನಲ್ಲಿ 1.04 ಲಕ್ಷ ಆಸನಗಳ ವ್ಯವಸ್ಥೆಯಿದೆ. ಈ ದಾಖಲೆಯನ್ನು ಗುಜರಾತ್ ಕ್ರಿಕೆಟ್ ಮಂಡಳಿ ಮುರಿಯುವ ನಿಟ್ಟಿನಲ್ಲಿ ಹಳೆಯ ಮೊಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸಿ 1.10 ಲಕ್ಷ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

Ahmedabad Stadium A

ಸರ್ದಾರ್ ಪಟೇಲ್ ಕ್ರೀಡಾಂಗಣ ಕೇವಲ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಷ್ಟೇ ಅಲ್ಲದೆ ವಿಶ್ವದ ಎರಡನೇ ದೊಡ್ಡ ಮೈದಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಉತ್ತರ ಕೊರಿಯಾದ ರುಂಗ್ರಾಡೊ ಮೆ ಡೆ ಸ್ಟೇಡಿಯಂ ಜಗತ್ತಿನ ಅತಿ ದೊಡ್ಡ ಮೈದಾನ ಎಂಬ ಖ್ಯಾತಿ ಹೊಂದಿದ್ದು, ಈ ಕ್ರೀಡಾಂಗಣದಲ್ಲಿ 1.50 ಲಕ್ಷ ಪ್ರೇಕ್ಷಕರು ಕುಳಿತುಕೊಂಡು ಪಂದ್ಯ ನೋಡಬಹುದು.

ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ಅನ್ನು ವಿನ್ಯಾಸಗೊಳಿಸಿದ ತಂಡವೇ ಈ ಸ್ಟೇಡಿಯಂ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದೆ. 64 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ 1.10 ಲಕ್ಷ ಜನರು ಕುಳಿತು ಕ್ರಿಕೆಟ್ ಪಂದ್ಯ ವೀಕ್ಷಿಸಬಹುದು. ಜೊತೆಗೆ ಕ್ರೀಡಾಂಗಣದಲ್ಲಿ 76 ಕಾರ್ಪೊರೇಟ್ ಬಾಕ್ಸ್ ಗಳು, ನಾಲ್ಕು ಡ್ರೆಸ್ಸಿಂಗ್ ರೂಮ್‍ಗಳು ಮತ್ತು ಮೂರು ಅಭ್ಯಾಸ ಮೈದಾನಗಳಿವೆ.

Ahmedabad Stadium F

ಮೂರು ಮಾದರಿಯ ಪಿಚ್:
ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಕೆಂಪು ಮತ್ತು ಕಪ್ಪು ಮಣ್ಣು ಬಳಸಿ ಮೂರು ಮಾದರಿಯ ಪಿಚ್‍ಗಳನ್ನು ಸಿದ್ಧಗೊಳಿಸಲಾಗಿದೆ. ಅವುಗಳ ಪೈಕಿ ಕೆಲವನ್ನು ಸಂಪೂರ್ಣ ಕಪ್ಪು ಮಣ್ಣಿನಿಂದ, ಇನ್ನೂ ಕೆಲವನ್ನು ಕೆಂಪು ಮಣ್ಣಿನಿಂದ ಹಾಗೂ ಮತ್ತೆ ಕೆಲವನ್ನು ಎರಡೂ ಮಣ್ಣುಗಳ ಮಿಶ್ರಣದಿಂದ ಸಿದ್ಧಪಡಿಸಲಾಗಿದೆ. ಸಾಧಾರಣವಾಗಿ ಮೈದಾನದ ನಾಲ್ಕು ಭಾಗಗಳಲ್ಲಿ ಫ್ಲಡ್ ಲೈಟ್ ಹಾಕಲಾಗುತ್ತದೆ, ಆದರೆ ಈ ಸ್ಟೇಡಿಯಂನಲ್ಲಿ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಸ್ಟೇಡಿಯಂಗೆ ಎಲ್‍ಇಡಿ ದೀಪಗಳನ್ನು ಹಾಕಲಾಗಿದ್ದು 30 ಮೀಟರ್ ದೂರದವರೆಗಿನ ಪ್ರದೇಶಗಳನ್ನು ದೀಪಗಳು ಕವರ್ ಮಾಡಲಿದೆ.

ಸಬ್ ಏರ್ ಸಿಸ್ಟಂ:
ಮಳೆ ಬಂದು ಸ್ಟೇಡಿಯಂನಲ್ಲಿ ನೀರು ನಿಂತು ಪಂದ್ಯ ರದ್ದಾಗುವ ಸಾಧ್ಯತೆ ಇರುತ್ತದೆ. ಆದರೆ ಇಂತಹ ಸಮಸ್ಯೆಗೆ ಸರ್ದಾರ್ ಪಟೇಲ್ ಮೈದಾನಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮೈದಾನವನ್ನು ಒಣಗಿಸುವ ಸಬ್ ಏರ್ ಸಿಸ್ಟಂ ತಂತ್ರಜ್ಞಾನ ಅಳವಡಿಸಲಾಗಿದೆ. ಮಳೆ ನಿಂತ ಅರ್ಧ ಗಂಟೆಗೆ ಮೈದಾನ ಒಣಗುತ್ತದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಸಬ್ ಏರ್ ಸಿಸ್ಟಂ ಅಳವಡಿಸಲಾಗಿದೆ.

Ahmedabad Stadium G

ಒಳಾಂಗಣ ಕ್ರಿಕೆಟ್ ಅಕಾಡೆಮಿ ಮತ್ತು ಒಲಿಂಪಿಕ್ ಮಾನದಂಡಗಳ ಪ್ರಕಾರ ಈಜುಕೊಳ, ಸ್ಕ್ವ್ಯಾಷ್ ಏರಿಯಾ ಹಾಗೂ ಟೇಬಲ್ ಟೆನಿಸ್ ಏರಿಯಾಗಳು ಕೂಡ ಸರ್ದಾರ್ ಪಟೇಲ್ ಮೈದಾನದಲ್ಲಿವೆ. ಜೊತೆಗೆ ಮೈದಾನದಲ್ಲಿ 3 ಡಿ ಥಿಯೇಟರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಅದರೊಂದಿಗೆ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ:
ಪಂದ್ಯ ವೀಕ್ಷಣೆಗೆ ಬರುವ ಜನರ ಬೈಕ್ ಹಾಗೂ ಕಾರ್ ಪಾರ್ಕಿಂಗ್ ವಿಶಾಲ ಜಾಗ ಒದಗಿಸಲಾಗಿದೆ. ಇಲ್ಲಿ 3,000 ಕಾರು ಹಾಗೂ 10,000 ಬೈಕ್‍ಗಳ ಪಾರ್ಕಿಂಗ್ ವ್ಯವಸ್ಥೆ ಇದೆ. ಜೊತೆಗೆ ಮೈದಾನಕ್ಕೆ ಸಂಪರ್ಕ ಕಲ್ಪಿಸಲು 300 ಮೀಟರ್ ದೂರದಲ್ಲೇ ಮೆಟ್ರೋ ನಿಲ್ದಾಣವನ್ನು ಸಹ ನಿರ್ಮಿಸಲಾಗುತ್ತಿದೆ. ಮೆಟ್ರೋ ನಿಲ್ದಾಣದಿಂದ ನೇರವಾಗಿ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸಲು ಸ್ಕೈವಾಕ್ ನಿರ್ಮಾಣವಾಗಲಿದೆ.

Ahmedabad stadium

ಅಷ್ಟೇ ಅಲ್ಲದೆ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯೋಜನೆ ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಐತಿಹಾಸಿಕ ಡೇ-ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಆದರೆ ಯಾವ ದೇಶದ ಜೊತೆಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದಕ್ಕೂ ಮುನ್ನವೇ ಐಪಿಎಲ್ ಪಂದ್ಯದೊಂದಿಗೆ ಸರ್ದಾರ್ ಪಟೇಲ್ ಸ್ಟೇಡಿಯಂ ಲೋಕಾರ್ಪಣೆಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಐಪಿಎಲ್‍ನಲ್ಲಿ ನೌಕೌಟ್ ಪಂದ್ಯಗಳು ಬಿಸಿಸಿಐ ಲೆಕ್ಕಚಾರದಂತೆ ನಡೆಯುತ್ತದೆ. ಈ ಪಂದ್ಯಗಳ ಟಿಕೆಟ್ ಮೂಲಕ ಬರುವ ಹಣ ಕೂಡ ಭಾರತೀಯ ಕ್ರಿಕೆಟ್ ಮಂಡಳಿಗೆ ಸೇರುತ್ತದೆ. ಹೀಗಾಗಿ ಫೈನಲ್ ಬಿಸಿಸಿಐ ಸೂಚನೆಯಂತೆ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಶೇ.90 ರಷ್ಟು ಕೆಲಸಗಳು ಮುಗಿದಿದ್ದು ಮಾರ್ಚ್ ಕೊನೆಯ ವೇಳೆಗೆ ಬಾ ಎಲ್ಲ ಕೆಲಸ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.

ವಿಶ್ವದ 5 ದೊಡ್ಡ ಕ್ರಿಕೆಟ್ ಸ್ಟೇಡಿಯಂಗಳು:
ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
ದೇಶ- ಆಸ್ಟ್ರೇಲಿಯಾ
ಆಸನಗಳು- 1,00,024

Melbourne stadium
ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ

ಈಡನ್ ಗಾರ್ಡನ್ಸ್
ದೇಶ- ಭಾರತ (ಕೊಲ್ಕತ್ತಾ)
ಆಸನಗಳು- 66,349
ಭಾರತದ ಅತಿ ದೊಡ್ಡ ಕ್ರಿಕೆಟ್ ಮೈದಾನ

ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ದೇಶ- ಭಾರತ (ಚತ್ತೀಸ್‍ಗಢ್)
ಆಸನಗಳು- 65,000

eden gardens stadium
ಈಡನ್ ಗಾರ್ಡನ್ಸ್

ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
ದೇಶ- ಭಾರತ (ಹೈದರಾಬಾದ್),
ಆಸನಗಳು- 60,000

ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂ
ದೇಶ- ಭಾರತ (ತಿರುವನಂತಪುರಂ)
ಆಸನಗಳು- 55,000.
ವಿಶೇಷತೆ: ಕ್ರಿಕೆಟ್ ಪಂದ್ಯಗಳನ್ನು ಹೊರತುಪಡಿಸಿ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

greenfield international stadium
ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂ

Share This Article
Leave a Comment

Leave a Reply

Your email address will not be published. Required fields are marked *