ಗಾಂಧಿನಗರ: ಪ್ರಕರಣವೊಂದರಲ್ಲಿ ತಪ್ಪೊಪ್ಪಿಕೊಳ್ಳುವಂತೆ ವ್ಯಕಿಯೊಬ್ಬನಿಗೆ ಚಿತ್ರಹಿಂಸೆ (Custodial torture case) ನೀಡಿದ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ (Sanjiv Bhatt) ಅವರನ್ನು ಗುಜರಾತ್‌ನ (Gujarat) ಪೋರಬಂದರ್‌ನ ನ್ಯಾಯಾಲಯವು ಖುಲಾಸೆಗೊಳಿಸಿದೆ. ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.
ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಲಾಯಿತು ಎಂದು ದೂರುದಾರ ಸಂಜೀವ್ ಭಟ್ ಅವರ ವಿರುದ್ಧ ಆರೋಪಿಸಿದ್ದ. ಅಲ್ಲದೇ ಅಪಾಯಕಾರಿ ಆಯುಧಗಳನ್ನು ಬಳಸಿ ನೋವುಂಟುಮಾಡುವ ಮೂಲಕ ಸ್ವಯಂಪ್ರೇರಣೆಯಿಂದ ಶರಣಾಗುವಂತೆ ಮಾಡಲಾಯಿತು ಎಂದು ಹೇಳಿಕೊಂಡಿದ್ದ. ಪ್ರಾಸಿಕ್ಯೂಷನ್‌ಗೆ ಈ ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ನರನ್ ಜಾದವ್ ಎಂಬಾತ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 330 (ತಪ್ಪೊಪ್ಪಿಗೆಗೆ ನೋವುಂಟುಮಾಡುವುದು) ಮತ್ತು 324 (ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಗಾಯಗೊಳಿಸುವುದು) ಅಡಿಯಲ್ಲಿ ಸಂಜೀವ್ ಭಟ್ ವಿರುದ್ಧ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು.
ಜಾಮ್‌ನಗರದಲ್ಲಿ ನಡೆದ ಕಸ್ಟಡಿ ಸಾವಿನ ಪ್ರಕರಣದಲ್ಲಿ ಭಟ್‌ಗೆ ಜೀವಾವಧಿ ಶಿಕ್ಷೆ ಮತ್ತು 1996 ರ ಪ್ರಕರಣದಲ್ಲಿ ಪಾಲನ್‌ಪುರದಲ್ಲಿ ರಾಜಸ್ಥಾನ ಮೂಲದ ವಕೀಲರನ್ನು ಬಂಧಿಸಲು ಡ್ರಗ್ಸ್ ಇಟ್ಟ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸದ್ಯ ಅವರನ್ನು ರಾಜ್‌ಕೋಟ್ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.