ಗುಜರಾತ್ ಚುನಾವಣೆ: ಯಾವ ಪಕ್ಷದಲ್ಲಿ ಎಷ್ಟು ಮಂದಿ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ?

Public TV
1 Min Read
CONGRESS BJP

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ 89 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ಡಿಸೆಂಬರ್ 9 ರಂದು ನಡೆಯಲಿದ್ದು, ಒಟ್ಟು 923 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರ ಪೈಕಿ 137 ಅಭ್ಯರ್ಥಿಗಳು ಅಂದರೆ ಶೇ.15ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಹಿನ್ನೆಲೆಗಳ ಬಗ್ಗೆ ಅಸೋಸಿಯೇಷನ್ ಆಫ್ ಡೆಮಾಕ್ರಾಟಿಕ್ ರಿಫಾರ್ಮಾಸ್ ಮತ್ತು ಗುಜರಾತ್ ಎಲೆಕ್ಷನ್ ವಾಚ್ ಎನ್‍ಜಿಒ ಸಂಸ್ಥೆ ವರದಿ ಬಿಡುಗಡೆ ಮಾಡಿದೆ.

ಈ ವರದಿಯಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಎಷ್ಟು ಜನರ ಮೇಲೆ ಕ್ರಿಮಿನಲ್ ಕೇಸ್ ಇದೆ? ಎಷ್ಟು ಜನ ಕೋಟ್ಯಾಧಿಪಿತಿಗಳು ಎನ್ನುವ ಮಾಹಿತಿ ಬಹಿರಂಗವಾಗಿದೆ.

ಚುನಾವಣಾ ಕಣದಲ್ಲಿರುವ 137 ಅಭ್ಯರ್ಥಿಗಳ ಪೈಕಿ 78 ಮಂದಿ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. ಇದರಲ್ಲಿ ಕೊಲೆ, ಅಪಹರಣ, ಅತ್ಯಾಚಾರದಂತಹ ಗಂಭೀರ ಆರೋಪಗಳು ಸೇರಿದೆ.

ಪಕ್ಷಗಳ ಹಿನ್ನೆಲೆಯಲ್ಲಿ ನೋಡುವುದಾದರೆ ಬಿಜೆಪಿ 89 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು ಅದರಲ್ಲಿ 10 ಅಭ್ಯರ್ಥಿಗಳ ಮೇಲೆ ಗಂಭೀರ ಕ್ರಿಮಿನಲ್ ಕೇಸ್ ಗಳಿದ್ದರೆ, ಕಾಂಗ್ರೆಸ್ ಪೈಕಿ 20 ಮಂದಿಯ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. ಬಿಎಸ್‍ಪಿಯಲ್ಲಿ 8 ಮಂದಿ ಮೇಲೆ, ಎನ್‍ಸಿಪಿಯಲ್ಲಿ 3, ಆಪ್ ನಲ್ಲಿ ಒಬ್ಬರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಒಟ್ಟಾರೆ 89 ವಿಧಾನಸಭಾ ಸ್ಥಾನಗಳಿಗೆ 977 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 54 ಅಭ್ಯರ್ಥಿಗಳ ಅರ್ಜಿಗಳು ತಿರಸ್ಕರಗೊಂಡಿವೆ ಎಂದು ಗುಜರಾತ್ ಎಲೆಕ್ಷನ್ ವಾಚ್ ಮಾಹಿತಿ ನೀಡಿದೆ. ಚುನಾವಣಾ ಸಮಿತಿಗೆ ನೀಡಿರುವ ಮಾಹಿತಿಯಲ್ಲಿ 137 ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ದೂರುಗಳ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖವಾಗಿ ಮಾಜಿ ಜೆಡಿ(ಯು) ಶಾಸಕ ಛೋಟು ವಾಸಾವ ಅವರ ಮಗ ಮಹೇಶ್ ವಾಸಾವ ಅವರ ಮೇಲೆ ಬರೋಬರಿ 24 ಕ್ರಿಮಿನಲ್ ಕೇಸ್ ಇದ್ದು ಅದರಲ್ಲಿ ಕೊಲೆ, ದರೋಡೆ ಆರೋಪಗಳಿವೆ.

Share This Article
Leave a Comment

Leave a Reply

Your email address will not be published. Required fields are marked *