ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್‍ಗೆ ಇದೇ 24ರಂದು ಆಗಮಿಸಲಿದ್ದಾರೆ. ಬಳಿಕ ಅವರು ತಮ್ಮ ‘ದಿ ಬೀಸ್ಟ್’ ಕಾರಿನಲ್ಲಿ ಅಹಮದಾಬಾದ್‍ನ ಸರ್ದಾರ್ ಪಟೇಲ್ ಸ್ಟೇಡಿಯಂಗೆ ತೆರಳಲಿದ್ದಾರೆ. ಭದ್ರತೆ ದೃಷ್ಟಿಯಿಂದ ಟ್ರಂಪ್ ಆಗಮನಕ್ಕೂ ಮುನ್ನವೇ ದಿ ಬೀಸ್ಟ್ ಕಾರು ಗುಜರಾತ್ ಸೇರಿದೆ. ಈ ಕಾರು ಅನೇಕ ವಿಶೇಷತೆಗಳನ್ನು ಹೊಂದಿದೆ.
ಟ್ರಂಪ್ ಅವರು ವಿಶೇಷ ವಿಮಾನ ಏರ್‍ಫೋರ್ಸ್-1 ಫೆಬ್ರವರಿ 24ರಂದು ಬೆಳಗ್ಗೆ 11.55 ಕ್ಕೆ ಅಹಮದಾಬಾದ್‍ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಈ ವೇಳೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲಿದ್ದಾರೆ. ಅಲ್ಲಿಂದ ಟ್ರಂಪ್ ಮತ್ತು ಮೋದಿ ಸಬರಮತಿ ಆಶ್ರಮಕ್ಕೆ ತೆರಳಲಿದ್ದು, 25 ನಿಮಿಷಗಳ ಕಾಲ ಅಲ್ಲಿಯೇ ಇರಲಿದ್ದಾರೆ. ಉಭಯ ನಾಯಕರು ‘ಇಂಡಿಯಾ ರೋಡ್ ಶೋ’ ಪ್ರದರ್ಶನ ನೀಡಿ ಮಧ್ಯಾಹ್ನ 1:15 ಕ್ಕೆ ಮೊಟೆರಾ ಕ್ರೀಡಾಂಗಣ ತಲುಪಲಿದ್ದಾರೆ.
Advertisement
Advertisement
ಮೊಟೆರಾ ಕ್ರೀಡಾಂಗಣದಲ್ಲಿ ಟ್ರಂಪ್ ಮತ್ತು ಮೋದಿಯವರ ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಆಹ್ವಾನಿಸಲಾಗಿದೆ. ಅವರು ಸುಮಾರು 150 ನಿಮಿಷಗಳ ಕಾಲ ಅಹಮದಾಬಾದ್‍ನಲ್ಲಿ ಇರಲಿದ್ದಾರೆ. ಇದರ ನಂತರ ಉಭಯ ನಾಯಕರು ಮಧ್ಯಾಹ್ನ 3:30ಕ್ಕೆ ದೆಹಲಿಗೆ ತೆರಳಲಿದ್ದಾರೆ. ಇದಕ್ಕಾಗಿ ಅಮೆರಿಕ ಮತ್ತು ಭಾರತದ ಭದ್ರತಾ ಸಂಸ್ಥೆಗಳು ಸಿದ್ಧತೆಗಳನ್ನು ಪ್ರಾರಂಭಿಸಿವೆ.
Advertisement
ಅಮೆರಿಕ ವಾಯುಪಡೆಯ ಸರಕು ವಿಮಾನ ಹಕ್ರ್ಯುಲಸ್ ಭಾನುವಾರ ಬೆಳಗ್ಗೆ ಅಹಮದಾಬಾದ್‍ಗೆ ಆಗಮಿಸಿದೆ. ಇದು ಟ್ರಂಪ್ ಅವರ ಭದ್ರತಾ ಕಾರು, ಸ್ನೈಪರ್ ಗಳು, ಪತ್ತೇದಾರಿ ಕ್ಯಾಮೆರಾಗಳು ಮತ್ತು ಅಗ್ನಿ ಸುರಕ್ಷತಾ ವ್ಯವಸ್ಥೆಗಳನ್ನು ಹೊತ್ತು ತಂದಿವೆ.
Advertisement
ಅಮೆರಿಕದಿಂದ ಟ್ರಂಪ್ ಅವರ ವಿಶೇಷ ಭದ್ರತಾ ಪಡೆ ಕೂಡ ಅಹಮದಾಬಾದ್ ತಲುಪಿದೆ. ಹೈಟೆಕ್ ಸುರಕ್ಷತಾ ಸಾಧನಗಳನ್ನು ಸಹ ಪರಿಚಯಿಸಲಾಗಿದೆ. ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಅಮೆರಿಕ ತಂಡ ಭಾನುವಾರ ಸ್ಥಳೀಯ ಅಧಿಕಾರಿಗಳನ್ನು ಭೇಟಿ ಮಾಡಿತ್ತು. ಅಧ್ಯಕ್ಷ ಟ್ರಂಪ್ ಅವರ ಭದ್ರತೆಗೆ 65 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 200 ಇನ್ಸ್‍ಪೆಕ್ಟರ್‍ಗಳು, 800 ಸಬ್ ಇನ್ಸ್‍ಪೆಕ್ಟರ್‍ಗಳು ಮತ್ತು 12,000 ನಗರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಎನ್‍ಎಸ್‍ಜಿ, ಸೆಂಟ್ರಲ್ ಫೋರ್ಸ್, ಎಸ್‍ಪಿಜಿ, ಎಲ್‍ಆರ್‍ಡಿ, ಎಸ್‍ಆರ್‍ಪಿಎಫ್ ಮತ್ತು ಸಿಆರ್‍ಪಿಎಫ್ ಸೇರಿದಂತೆ ಒಟ್ಟು 25 ಸಾವಿರ ಸೈನಿಕರನ್ನು ಅವರ ರಕ್ಷಣೆಯಲ್ಲಿ ನಿಯೋಜಿಸಲಾಗುವುದು. ಫೆಬ್ರವರಿ 19ರಿಂದ ಎಲ್ಲಾ ಭದ್ರತಾ ಪಡೆಗಳು ತಮ್ಮ ಕಾರ್ಯ ಆರಂಭಿಸಲಿವೆ. ದಿ ಬೀಸ್ಟ್ ಅಷ್ಟೇ ಅಲ್ಲದೆ ವೈದ್ಯಕೀಯ ಸೌಲಭ್ಯ, ಭದ್ರತೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸು ಕಾರುಗಳು ಕೂಡ ಬಂದು ಅಹಮದಾಬಾದ್ ಸೇರಿವೆ.
ಟ್ರಂಪ್ ಕಾರಿನ ವಿಶೇಷತೆ:
ಅಮೆರಿಕದ ಅಧ್ಯಕ್ಷರು ಪ್ರವಾಸದ ವೇಳೆ ಏರ್ ಫೋರ್ಸ್ ಒನ್ ವಿಮಾನವನ್ನು ಬಳಕೆ ಮಾಡುತ್ತಾರೆ. ರಸ್ತೆಯಲ್ಲಿ ಸಂಚಾರದ ವೇಳೆ ಭಾರೀ ಭದ್ರತೆ ಉದ್ದೇಶದಿಂದ ದಿ ಬೀಸ್ಟ್ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರನ್ನು ‘ಕ್ಯಾಡಿಲಾಕ್’, ‘ಲಿಮೋಸಿನ್ ಒನ್’, ‘ಫಸ್ಟ್ ಕಾರು’ ಎಂದು ಕರೆಯಲಾಗುತ್ತದೆ.
‘ಕ್ಯಾಡಿಲಾಕ್’ ಕಂಪನಿ ಈ ವಿಶೇಷ ಕಾರನ್ನು ತಯಾರಿಸಿದೆ. ಕಸ್ಟಮೈಸ್ಡ್ ಕಾರು(ಏನೇನು ವಿಶೇಷತೆಗಳು, ಆಯ್ಕೆಗಳು ಬೇಕೋ ಅವುಗಳನ್ನು ಸೇರಿಸಿ ಪ್ರತ್ಯೇಕವಾಗಿ ನಿರ್ಮಾಣವಾಗುವ ಕಾರು) ಶಸ್ತ್ರಸಜ್ಜಿತ, ಬಹಳ ಸ್ಥಳಾವಕಾಶವುಳ್ಳ, ಐಷಾರಾಮಿ ಮಾದರಿ ಕಾರು ಇದಾಗಿದೆ. 2018ರ ಸೆಪ್ಟೆಂಬರ್ 24ರಿಂದ ಈಗಿನ ಕಾರನ್ನು ಬಳಕೆ ಮಾಡಲಾಗುತ್ತಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ‘ಕ್ಯಾಡಿಲಾಕ್ ಒನ್’ ಕಾರು ಬಳಸುತ್ತಿದ್ದರು. ಡೊನಾಲ್ಡ್ ಟ್ರಂಪ್ ಸಹ ಕೆಲಕಾಲ ಅದೇ ಕಾರು ಬಳಸುತ್ತಿದ್ದರು. ಆದರೆ 2018ರಿಂದ ಟ್ರಂಪ್ ದಿ ಬೀಸ್ಟ್ ಕಾರನ್ನು ಬಳಸಲು ಆರಂಭಿಸಿದರು.
ಇಡೀ ಕಾರು ಗುಂಡು ನಿರೋಧಕ ವ್ಯವಸ್ಥೆ ಹೊಂದಿದ್ದು, ಐದು ಇಂಚು ದಪ್ಪದ ಮಿಲಿಟರಿ ಗ್ರೇಡ್‍ನ ಲೋಹವನ್ನು ಕಾರಿನ ಬಾಡಿಗೆ ಬಳಸಲಾಗಿದೆ. ಸ್ಟೀಲ್, ಟೈಟಾನಿಯಂ, ಅಲ್ಯುಮಿನಿಯಂ ಮತ್ತು ಸೆರಾಮಿಕ್ಸ್ ಅನ್ನು ಮಿಶ್ರಮಾಡಿ ವಿಶಿಷ್ಟ ಲೋಹ ಸಿದ್ಧಪಡಿಸಲಾಗಿದೆ. ಬೋಯಿಂಗ್ 757 ವಿಮಾನದಲ್ಲಿ ಬಳಸುವಂತಹ 8 ಇಂಚು ದಪ್ಪದ ಬಾಗಿಲುಗಳಿರುತ್ತವೆ. ಬಾಗಿಲು ಹಾಕಿಕೊಂಡಾಗ ಕಾರು 100% ರಾಸಾಯನಿಕ ಆಯುಧ ನಿರೋಧಕ ವ್ಯವಸ್ಥೆ ಹೊಂದಿರುತ್ತದೆ.
ಕಿಟಕಿಗಳು ಐದು ಪದರಗಳ ಗಾಜು ಮತ್ತು ಪಾಲಿಕಾರ್ಬೊನೇಟ್ ಶೀಟ್‍ಗಳನ್ನು ಹೊಂದಿವೆ. ಆದರೆ ಅವುಗಳನ್ನು ಯಾವ ಕಾರಣಕ್ಕೂ ತೆರೆಯುವುದು ಸಾಧ್ಯವಿಲ್ಲ. ತುರ್ತು ಸಂದರ್ಭಗಳಲ್ಲಿ ಚಾಲಕನ ಬಾಗಿಲಿನ ಕಿಟಕಿಯ ಗಾಜುಗಳನ್ನು ಮಾತ್ರ 3 ಇಂಚಿನಷ್ಟು ಮಾತ್ರ ಕೆಳಕ್ಕೆ ಇಳಿಸಬಹುದು. ದಿ ಬೀಸ್ಟ್ ಕಾರಿಗೆ ಪಂಕ್ಚರ್ ನಿರೋಧಕ ಬಲಿಷ್ಠ ಟಯರ್ ಗಳನ್ನು ಅಳವಡಿಸಿರುವುದು ವಿಶೇಷ. ಒಂದು ವೇಳೆ ಟಯರ್ ಸ್ಫೋಟಗೊಂಡರೂ ಕಾರು ಚಲಿಸುವಂತಹ ಮಾದರಿಯಲ್ಲಿ ಸ್ಟೀಲ್ ರಿಮ್‍ಗಳನ್ನು ವಿನ್ಯಾಸಗೊಳಿಸಲಾಗಿದೆ.
ಚಾಲಕನಿಗೆ ಅತ್ಯಾಧುನಿಕ ಸಂವಹನಾ ವ್ಯವಸ್ಥೆ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಇರುತ್ತದೆ. ತುರ್ತು ಸಂದರ್ಭದಲ್ಲಿ ಮಿಲಿಟರಿ ಆಪರೇಷನ್ ಸಹ ಮಾಡುವ ಸಾಮಥ್ರ್ಯ ಈ ಕಾರಿಗೆ ಇದೆ. ಕಾರಿನ ಮುಂಭಾಗದಲ್ಲಿ ರಾಕೆಟ್ ಗ್ರೆನೇಡ್ ಲಾಂಚರ್, ಟಿಯರ್ ಗ್ಯಾಸ್ ಫಿರಂಗಿ, ರಾತ್ರಿ ವೇಳೆಯೂ ಸ್ಪಷ್ಟವಾಗಿ ಕಾರ್ಯನಿರ್ವಹಿಸುವ ಕ್ಯಾಮೆರಾಗಳು ಇರುತ್ತವೆ. ವಿರೋಧಿಗಳು ದಾಳಿ ನಡೆಸಿದರೆ ಬೆಂಕಿ ಹೊಗೆ ಗ್ರೆನೇಡ್ ಸಹ ಇದರಲ್ಲಿ ಇದೆ.
ಅಮೆರಿಕ ಅಧ್ಯಕ್ಷರಷ್ಟೇ ಅಲ್ಲದೆ ಇನ್ನೂ ನಾಲ್ವರು ಕಾರಿನಲ್ಲಿ ಕುಳಿತುಕೊಳ್ಳಬಹುದು. ಅಧ್ಯಕ್ಷರಿಗೆ ಗಾಜಿನ ಕ್ಯಾಬಿನ್ ಇರುತ್ತದೆ. ಪ್ಯಾನಿಕ್ ಬಟನ್, ತುರ್ತು ಪರಿಸ್ಥಿತಿಗಳಲ್ಲಿ ಬಳಸಲು ಪ್ರತಿಯೊಬ್ಬರಿಗೂ ಪ್ರತ್ಯೇಕ ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುತ್ತದೆ. ಅಧ್ಯಕ್ಷರ ರಕ್ತದ ಮಾದರಿ ಸಹ ಇರುತ್ತದೆ. ದೇಶದ ಉಪಾಧ್ಯಕ್ಷರು ಮತ್ತು ಪೆಂಟಗನ್ ಜತೆಗೆ ಅಧ್ಯಕ್ಷರಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಸಂವಹನ ವ್ಯವಸ್ಥೆ ಇರುತ್ತದೆ.
ಅಮೆರಿಕ ಅಧ್ಯಕ್ಷರ ಕಾರು ಚಾಲಕನಿಗೆ ಅಮೆರಿಕ ಸೇನೆಯು ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ಎದೆಗುಂದದೆ ಚಾಲನೆ ಮಾಡುವ ತರಬೇತಿಯನ್ನು ನೀಡಲಾಗಿರುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ತಪ್ಪಿಸಿಕೊಳ್ಳುವ, ಎದುರಾಳಿಗಳ ದಿಕ್ಕುತಪ್ಪಿಸುವ ಮತ್ತು 180 ಡಿಗ್ರಿಯಲ್ಲಿ ಕಾರು ತಿರುಗಿಸುವ ತರಬೇತಿಯನ್ನೂ ನೀಡಲಾಗಿರುತ್ತದೆ. ಒಂದು ವೇಳೆ ಅಗ್ನಿ ಅನಾಹುತವಾದರೂ ಅಗ್ನಿ ನಂದಿಸುವ ವ್ಯವಸ್ಥೆ ಸಹ ಕಾರಿನಲ್ಲಿದೆ.
ಮೈಲೇಜ್ ಎಷ್ಟು ನೀಡುತ್ತೆ?
9 ಟನ್ ತೂಕದ ಕಾರು ಪ್ರತಿ ಗಂಟೆಗೆ 97 ಕಿ.ಮೀ ಸಂಚರಿಸುತ್ತದೆ. ಒಂದು ಯುಎಸ್ ಗ್ಯಾಲನ್(3.7 ಲೀಟರ್) ಇಂಧನಕ್ಕೆ 12 ಕಿ.ಮೀ ಸಂಚರಿಸುವ ಸಾಮಥ್ರ್ಯವನ್ನು ಕಾರು ಹೊಂದಿದೆ. ಬೀಸ್ಟ್ ಕಾರಿನ ಜೊತೆ ಇತರ ಶಸ್ತ್ರ ಸಜ್ಜಿತ ಕಾರುಗಳು ಸಂಚರಿಸುತ್ತವೆ. ಈ ಎಲ್ಲ ಕಾರು ಸಾಗಾಣಿಕಾ ವಿಮಾನದಲ್ಲಿ ವಿದೇಶಕ್ಕೆ ತೆರಳುತ್ತವೆ.