ರಾಜ್ಯದ ಶಕ್ತಿಸೌಧ ಇನ್ಮುಂದೆ ಜನರ ವೀಕ್ಷಣೆಗೆ ಮುಕ್ತ – ವಿಧಾನಸೌಧ ಗೈಡೆಡ್ ಟೂರ್‌ಗೆ ಇಂದು ಚಾಲನೆ

Public TV
3 Min Read
Guided tour of Vidhana Soudha

– ಜೂ.1 ರಿಂದ ವಿಧಾನಸೌಧ ವೀಕ್ಷಣೆಗೆ ಅಧಿಕೃತವಾಗಿ ಜನರಿಗೆ ಅವಕಾಶ

ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧ ಇನ್ಮುಂದೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ. ರಾಜ್ಯದ ಶಕ್ತಿಸೌಧವನ್ನು ದೂರದಿಂದಲೇ ನೋಡಿ ಫೋಟೊ ಕ್ಲಿಕ್ಕಿಸಿ ಸಂತಸ ಪಡುತ್ತಿದ್ದವರಿಗೆ ಈಗ ಹತ್ತಿರದಿಂದಲೇ ನೋಡುವ ಸದಾವಕಾಶ ಸಿಕ್ಕಿದೆ. ಭವ್ಯ ವಿಧಾನಸೌಧ ವೀಕ್ಷಣೆಗೆ ಸರ್ಕಾರದಿಂದ ಪ್ರವಾಸ ಭಾಗ್ಯ ಶುರುವಾಗಿದೆ.

ಬೆಂದಕಾಳೂರಿನ ಹೆಗ್ಗುರುತು, ರಾಜ್ಯದ ಆಡಳಿತ ಶಕ್ತಿಸೌಧ ಅಂತನೇ ಕರೆಯಿಸಿಕೊಳ್ಳುವ ವಿಧಾನಸೌಧ ಈಗ ಪ್ರವಾಸಿ ತಾಣ. ಇಲ್ಲಿಯವರೆಗೂ ಕೇವಲ ಗೇಟ್ ಹೊರಭಾಗದಿಂದ, ರಸ್ತೆಯಿಂದ ಕಾಣಿಸುತ್ತಿದ್ದ ವಿಧಾನಸೌಧ ಇನ್ಮುಂದೆ ಪ್ರವಾಸಿ ಸ್ಥಳ ಆಗಲಿದೆ. ಗೈಡೆಡ್ ಟೂರ್ (Guided Tour) ಹೆಸರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸರ್ಕಾರ ಅವಕಾಶ ನೀಡಿದೆ‌. ಇನ್ಮುಂದೆ ವಿಧಾನಸೌಧದ ಒಳಗೆ ಹೋಗಿ ಭವ್ಯ ಐತಿಹಾಸಿಕ ಕಟ್ಟಡವನ್ನು ಕಣ್ತುಂಬಿಕೊಳ್ಳಬಹುದು. ಇದನ್ನೂ ಓದಿ: ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ: ಯುಟಿ ಖಾದರ್

Vidhana Soudha

ವಿಧಾನಸೌಧ ಗೈಡೆಡ್ ಟೂರ್‌‌ಗೆ (Vidhan Soudha) ಇಂದು ಚಾಲನೆ ಕೊಡಲಾಯಿತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಹೆಚ್‌.ಕೆ. ಪಾಟೀಲ್, ಸ್ಪೀಕರ್ ಖಾದರ್ ಹಾಗೂ ಸಭಾಪತಿ ಹೊರಟ್ಟಿ ಅವರು ಗೈಡೆಡ್ ಟೂರ್ ಉದ್ಘಾಟಿಸಿದರು. ಜೂ.1 ರಿಂದ ಅಧಿಕೃತವಾಗಿ ವಿಧಾನಸೌಧ ವೀಕ್ಷಣೆಗೆ ಜನರಿಗೆ ಅವಕಾಶ ಸಿಗಲಿದೆ.

ಕಳೆದ 75 ವರ್ಷಗಳಿಂದ ಆಡಳಿತಾತ್ಮಕ ಕಾರ್ಯಗಳಿಗಷ್ಟೇ ಸೀಮಿತವಾಗಿದ್ದ ವಿಧಾನಸೌಧ ಇನ್ಮುಂದೆ ಪ್ರೇಕ್ಷಣೀಯ ಸ್ಥಳದ ಸಾಲಿಗೆ ಸೇರ್ಪಡೆಯಾಗಿದೆ. ಜೂನ್ 1 ರಿಂದ ಸೀಮಿತ ಪ್ರತಿ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರದಂದು ವಿಧಾನಸೌಧ ಗೈಡೆಡ್ ಟೂರ್‌ಗೆ ಅವಕಾಶ ಇದೆ. ಪ್ರವಾಸಿಗರಿಗೆ ತಲಾ 50 ರೂ. ಪ್ರವೇಶ ಶುಲ್ಕ ವಿಧಿಸಲಾಗಿದೆ. 15 ವರ್ಷದೊಳಗಿನ ಮಕ್ಕಳಿಗೆ ಹಾಗೂ ಎಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ ಇರಲಿದೆ. 30 ಜನರನ್ನೊಳಗೊಂಡ ಒಂದು ಬ್ಯಾಚ್‌ನಂತೆ 10 ಬ್ಯಾಚ್‌ಗಳಿಗೆ ವಿಧಾನಸೌಧ ವೀಕ್ಷಣೆಗೆ ಅವಕಾಶವಿದೆ. ಸದ್ಯಕ್ಕೆ 10 ಜನ ಗೈಡ್‌ಗಳು ವಿಧಾನಸೌಧದ ಭವ್ಯತೆ, ಪರಂಪರೆ, ಇತಿಹಾಸ, ಕಟ್ಟಡ ಶೈಲಿ, ಅಧಿವೇಶಗಳ ಬಗ್ಗೆ ವಿವರಣೆ ಕೊಡಲಿದ್ದಾರೆ. ಗ್ರ್ಯಾಂಡ್ ಸ್ಟೆಪ್ಸ್, ಕಟ್ಟಡ ಶೈಲಿ, ಸಭಾಂಗಣಗಳು, ವೀಕ್ಷಕರ ಗ್ಯಾಲರಿ, ವಿಧಾನಸೌಧ ಫೌಂಡೇಷನ್ ಸ್ಟೋನ್, ಗಣ್ಯರ ಪ್ರತಿಮೆಗಳು, ಭುವನೇಶ್ವರಿ ಪ್ರತಿಮೆ, ಸಿಎಂ ಕೊಠಡಿ, ಸಂಪುಟ ಸಭೆ ಕೊಠಡಿ ಮುಂಭಾಗಗಳು, ವಿಧಾನಸೌಧದ ವಿಶಾಲ ಕಾರಿಡಾರ್‌ಗಳ ವೀಕ್ಷಣೆ ಮತ್ತು ವಿವರಣೆ ಇರಲಿದೆ. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಗಾಳಿ ಮಳೆ ಅಬ್ಬರ – ಹಳ್ಳಕ್ಕೆ ಉರುಳಿದ ಕಾರುಗಳು!

ಹೇಗಿರಲಿದೆ ಶಕ್ತಿಸೌಧ ಗೈಡೆಡ್ ಟೂರ್?
* ಪ್ರತೀ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ವಿಧಾನಸೌಧ ಪ್ರವಾಸ.
* ಆನ್‌ಲೈನ್‌ನಲ್ಲಿ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು.
* ಜೂನ್ 1 ರಿಂದ ಅಧಿಕೃತ ವಿಧಾನಸೌಧ ಪ್ರವಾಸ ಆರಂಭ.
* ವಿಧಾನಸೌಧ ಟೂರ್‌ಗೆ 16 ವರ್ಷ ಮೇಲ್ಪಟ್ಟವರಿಗೆ 50 ರೂಪಾಯಿ ದರ ನಿಗದಿ.
* 16 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳಿಗೆ, ಎಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ.
* https://kstdc.co/activities ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಬೇಕು.
* ವಿಧಾನಸೌಧ ಟೂರ್ ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಇರಲಿದೆ.
* ಹತ್ತು ಬ್ಯಾಚ್‌ಗಳಿಗೆ ಮಾತ್ರ ಅವಕಾಶ‌. ಪ್ರತೀ ಬ್ಯಾಚ್‌ನಲ್ಲಿ 30 ಮಂದಿ.
* ವಿಧಾನಸೌಧ ಪ್ರವಾಸಕ್ಕೆ ಪ್ರತಿ ಬ್ಯಾಚ್‌ಗೂ ಒಂದೂವರೆ ಗಂಟೆ ಸಮಯ, ಒಂದೂವರೆ ಕಿಮೀ ನಡಿಗೆ ಇರಲಿದೆ.
* ವಿಕಾಸಸೌಧದ ಎಂಟ್ರಿ ಗೇಟ್ (ನಂಬರ್ 3) ಮೂಲಕ ಟೂರ್ ಆರಂಭವಾಗಲಿದೆ.
* 20 ನಿಮಿಷ ಮುಂಚೆ ಟೂರ್ ಆರಂಭಕ್ಕೂ ಮುನ್ನ ಹಾಜರಿರಬೇಕು.
* ಟಿಕೆಟ್ ಬುಕ್ ಮಾಡಿದವರು ಸರ್ಕಾರ ವಿತರಿಸಿರುವ ಯಾವುದಾದರೂ ಗುರುತಿನ ಚೀಟಿ ತರಬೇಕು.
* ವಿಧಾನಸೌಧ ಟೂರ್ ವೇಳೆ ನಿಗದಿತ ಸ್ಥಳದಲ್ಲಿ ಫೋಟೋ ತೆಗೆಯಲು ಅವಕಾಶ.
* ವಿಧಾನಸೌಧ ಟೂರ್‌ಗೆ 10 ಗೈಡ್‌ಗಳ ನೇಮಕ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನೀಡಲಾಗತ್ತೆ.

Share This Article