ಹಿಂದೂಗಳ ಹಬ್ಬ ಯುಗಾದಿಯನ್ನು (Ugadi) ಮಹಾರಾಷ್ಟ್ರದಲ್ಲಿ ʼಗುಡಿ ಪಾಡ್ವಾʼ (Gudi Padwa) ಎಂದು ಆಚರಿಸಲಾಗುತ್ತದೆ. ಗುಡಿ ಎಂದರೆ ಗೊಂಬೆ ಎಂದರ್ಥ. ಇದು ಮಹಾರಾಷ್ಟ್ರದಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಗುಡಿ ಪಾಡ್ವಾವನ್ನು ಮಹಾರಾಷ್ಟ್ರದ (Maharashtra) ಜನರು ಹೇಗೆ ಆಚರಿಸುತ್ತಾರೆ? ಈ ಹಬ್ಬದ ಹಿನ್ನೆಲೆ ಏನು ಎಂಬುದರ ಕುರಿತು ಸಣ್ಣ ಮಾಹಿತಿ ಇಲ್ಲಿದೆ.
ಮರಾಠಿಯನ್ನರು ಗುಡಿ ಪಾಡ್ವಾದಂದು ಬೇವಿನ ಎಲೆ, ಬೆಲ್ಲವನ್ನು ದೇವರಿಗೆ ಅರ್ಪಿಸಿ ಕುಟುಂಬದವರು, ಅಕ್ಕಪಕ್ಕದ ಮನೆ ಮತ್ತು ನೆಂಟರಿಷ್ಟರಿಗೆ ಹಂಚುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ, ಈ ದಿನ ವಸಂತ ಕಾಲದ ಆರಂಭ ಎಂದರ್ಥ.
ಗುಡಿ ಪಾಡ್ವಾ ಹಬ್ಬದ ಹಿನ್ನೆಲೆ ಏನು?
ಈ ದಿನ ಬ್ರಹ್ಮ ದೇವರು ಜಗತ್ತನ್ನು ಮರು ಸೃಷ್ಟಿಸಿದ ಎಂಬ ಮಾತಿದೆ. ನೆರೆ ಬಂದು ಜಗತ್ತೆಲ್ಲಾ ನಾಶವಾಗಿರುತ್ತದೆ. ಆ ನಂತರ ಬ್ರಹ್ಮ ಜಗತ್ತನ್ನು ಮರು ಸೃಷ್ಟಿಸುತ್ತಾನೆ. ಈ ದಿನ ರಾಮ ದೇವರು ವಾಲಿಯನ್ನು ಕೊಂದು ಜಯಶಾಲಿಯಾದ ದಿನ. ಹೀಗಾಗಿ ಯುಗಾದಿ ಹಿಂದೂಗಳ ಪಾಲಿಗೆ ಅತ್ಯಂತ ವಿಶೇಷ ಹಬ್ಬವಾಗಿದೆ.
ಚೈತ್ರ ಮಾಸದ ಆರಂಭದೊಂದಿಗೆ ಹೊಸ ವರ್ಷದ ಆರಂಭವನ್ನು ಘೋಷಿಸುವ ಗುಡಿ ಪಾಡ್ವಾ ಮಹಾರಾಷ್ಟ್ರದ ಪ್ರಮುಖ ಹಬ್ಬವಾಗಿದೆ. ಗುಡಿ ಪಾಡ್ವಾ ರಾಕ್ಷಸ ರಾಜ ರಾವಣನ ಮೇಲೆ ಶ್ರೀರಾಮನ ವಿಜಯದ ಆಚರಣೆಯನ್ನು ಸೂಚಿಸುತ್ತದೆ. ಆದರೆ ಹಿಂದೂ ಧರ್ಮದ ಮಹಾಕಾವ್ಯಗಳಲ್ಲಿ ಒಂದಾದ ಬ್ರಹ್ಮ ಪುರಾಣವು ಹೇಳುವಂತೆ ಗುಡಿ ಪಾಡ್ವಾವು ಇಡೀ ವಿಶ್ವವನ್ನು ಸೃಷ್ಟಿಸಿದ ದಿನವನ್ನು ಸೂಚಿಸುತ್ತದೆ.
ಗುಡಿ ಪಾಡ್ವಾ ಹಬ್ಬವನ್ನು ಏಕೆ ಆಚರಿಸುತ್ತಾರೆ?
ಜೋತಿಷ್ಯ ಮಹತ್ವ:
ಚಂದ್ರನ ಪಂಚಾಂಗದ ಪ್ರಕಾರ ಸೂರ್ಯನು ರಾಶಿಚಕ್ರದ ಮೊದಲ ರಾಶಿಯಾದ ಮೇಷ ರಾಶಿಗೆ ಪ್ರವೇಶಿಸುವ ದಿನವನ್ನು ಗುಡಿ ಪಾಡ್ವಾ ಎಂದು ಕರೆಯುತ್ತಾರೆ. ಇದು ಹೊಸ ಆರಂಭಗಳಿಗೆ ಮಂಗಳಕರ ಸಮಯ ಎಂದು ಹೇಳಲಾಗುತ್ತದೆ.
ಸಾಂಸ್ಕೃತಿಕ ಮಹತ್ವ:
ಗುಡಿ ಪಾಡ್ವಾ ಹಬ್ಬ ವಸಂತ ಋತುವಿನ ಆರಂಭ ಮತ್ತು ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ದಿನವೆಂದು ಪರಿಗಣಿಸಲಾಗುತ್ತದೆ.
ಐತಿಹಾಸಿಕ ಮಹತ್ವ:
ಗುಡಿ ಪಾಡ್ವಾ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ಮೊಘಲರನ್ನು ಯಶಸ್ವಿಯಾಗಿ ಸೋಲಿಸಿ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪೌರಾಣಿಕ ವಿಜಯದೊಂದಿಗೆ ಗುಡಿ ಪಾಡ್ವಾ ಕೂಡ ಸಂಬಂಧಿಸಿದೆ.
ಈ ಹಬ್ಬದ ದಿನದಂದು ಬಿದಿರಿನ ಕೋಲಿನಿಂದ ಅಲಂಕರಿಸಲ್ಪಟ್ಟ ಕಂಬವನ್ನು ಹೂಗಳು ಹಾಗೂ ಬೇವಿನ ಎಲೆಗಳಿಂದ ಅಲಂಕರಿಸಿ ಬಟ್ಟೆ ಮತ್ತು ತಲೆಕೆಳಗಾದ ಕಲಶದಿಂದ ಗುಡಿಯನ್ನು ಎತ್ತುತ್ತಾರೆ. ಈ ಗುಡಿಯನ್ನು ಮನೆಯ ಹೊರಗೆ ಇರಿಸಲಾಗುತ್ತದೆ. ಇದು ವಿಜಯ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ.
ಗುಡಿ ಪಾಡ್ವಾದಂದು ಜನರು ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಈ ದಿನ ಮಹಾರಾಷ್ಟ್ರದ ಮಹಿಳೆಯರು ನೌವಾರಿ ಸೀರೆ ಮತ್ತು ಪುರುಷರು ಕುರ್ತಾ ಪೈಜಾಮ ಧರಿಸಿ ಕಂಗೊಳಿಸುತ್ತಾರೆ. ಈ ದಿನ ಮಹಾರಾಷ್ಟ್ರದ ರಸ್ತೆಗಳಲ್ಲಿ ರಂಗೋಲಿಗಳು ಕಣ್ಮನ ಸೆಳೆಯುತ್ತಿರುತ್ತವೆ. ಅಲ್ಲದೇ ಮಹಿಳೆಯರು ಹಾಗೂ ಪುರುಷರು ಮೆರವಣಿಗೆ ತೆರಳಿ ಹಾಡು ಕುಣಿತಗಳ ಮೂಲಕ ಹಬ್ಬವನ್ನು ಸಂಭ್ರಮಿಸುತ್ತಾರೆ.