ಬೆಳಗಾವಿ: ಗೋಕಾಕ್ ತಾಲೂಕಿನಾದ್ಯಂತ ಭಾರಿ ಮಳೆಗೆ ಸುರಿಯುತ್ತಿದ್ದು, ಪರಿಣಾಮ ಗೋಕಾಕ್ ಫಾಲ್ಸ್ ಬಳಿ 2ನೇ ಬಾರಿಗೆ ಗುಡ್ಡ ಕುಸಿತ ಸಂಭವಿಸಿದೆ.
ಬೆಳಗಾವಿ ಹಾಗೂ ಗೋಕಾಕ್ ಮಧ್ಯೆ ಸಂಪರ್ಕಿಸುವ ರಸ್ತೆಯಲ್ಲಿ ಸಂಜೆ ವೇಳೆಯಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಗೋಕಾಕ್ ಫಾಲ್ಸ್ ಗೆ ಹೊಂದಿಕೊಂಡಿರುವ ರಸ್ತೆ ಪಕ್ಕದಲ್ಲೇ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಮೇಲೆ ಬೃಹತ್ ಗಾತ್ರದ ಕಲ್ಲುಗಳು ಉರುಳಿ ಬಿದ್ದಿದೆ. ಪರಿಣಾಮ ಈ ಮಾರ್ಗವಾಗಿ ಸಂಚಾರ ನಡೆಸುವ ವಾಹನ ಸವಾರರು ಆತಂಕಗೊಂಡಿದ್ದು, ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದೆ.
Advertisement
Advertisement
ಗೋಕಾಕ್ ನಗರಕ್ಕೆ ಹೊಂದಿಕೊಂಡಿರುವ ಗುಡ್ಡ ಮಳೆಗೆ ಈಗಾಗಲೇ ಕುಸಿಯುತ್ತಿರುವುದರಿಂದ ಸತತ 12 ಗಂಟೆಗಳ ಕಾಲ ಎನ್‍ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಎನ್‍ಡಿಆರ್‍ಎಫ್ ಸಿಬ್ಬಂದಿ ಸಂಜೆ ವೇಳೆಗೆ ಗುಡ್ಡ ಕುಸಿಯುತ್ತಿದ್ದ ಸ್ಥಳ ಪರಿಶೀಲನೆ ನಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಮತ್ತೆ ನಾಳೆ ಬೆಳಗ್ಗೆ 7 ಗಂಟೆಗೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಸದ್ಯ ಬೃಹತ್ ಬಂಡೆಗಲ್ಲು ಮುಂಭಾಗದಲ್ಲಿ ಮೊದಲು 20 ಅಡಿ ತಗ್ಗು ನಿರ್ಮಾಣ ಮಾಡಿರುವ ಎನ್‍ಡಿಆರ್ ಎಫ್ ತಂಡ ಬಳಿಕ 2 ಬಂಡೆಗಳನ್ನು ಸ್ಫೋಟ ಮಾಡಲು ಸಿದ್ಧತೆ ನಡೆಸಿದೆ. ಸ್ಫೋಟದ ಸಂದರ್ಭದಲ್ಲಿ ಚೂರಾದ ಬಂಡೆಗಲ್ಲುಗಳನ್ನು ತಗ್ಗಿನಲ್ಲಿ ಹಾಕಲು ತಜ್ಞರು ಕಾರ್ಯಾಚರಣೆ ನಡೆಸಿದ್ದಾರೆ.