ತುಮಕೂರು: ಗುಬ್ಬಿ ತಾಲೂಕಿನ ಮಂಚಲದೊರೆ ಮತ್ತು ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಮದ್ಯ ಅಕ್ರಮ ಮಾರಾಟದ ವಿರುದ್ಧ ಘೋಷಣೆ ಕೂಗಿ ಶನಿವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಟ್ಟುಗೂಡಿ ಮಂಚಲದೊರೆ ಗ್ರಾಮ ಪಂಚಾಯಿತಿಯ ಕಚೇರಿಗೆ ಮುತ್ತಿಗೆ ಹಾಕಿ ಮದ್ಯ ಅಕ್ರಮ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿದರು. ಮದ್ಯ ಮಾರಾಟದಿಂದ ತಮಗಾಗುತ್ತಿರುವ ದುಷ್ಪರಿಣಾಮಕ್ಕೆ ಬೇಸತ್ತ ವಿದ್ಯಾರ್ಥಿಗಳು, ಕುಡುಕರ ಕಿರುಕುಳ ತಾಳಲಾರದೆ ಮತ್ತು ತಮ್ಮ ಕುಟುಂಬಗಳ ರಕ್ಷಣೆಗಾಗಿ ಪ್ರತಿಭಟನೆ ನಡೆಸಿದ್ದಾರೆ.
Advertisement
Advertisement
ಗ್ರಾಮ ಪಂಚಾಯಿತಿಯ ಮುಂದೆ ಸೇರಿದ ಅನೇಕ ವಿದ್ಯಾರ್ಥಿಗಳು ಟೈಯರ್‍ಗೆ ಬೆಂಕಿ ಹಚ್ಚಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ನ್ಯಾಯಕ್ಕಾಗಿ ಒತ್ತಾಯಿಸಿದರು. ಹಿರಿಯ ವಿದ್ಯಾರ್ಥಿನಿಯೊಬ್ಬಳು ಮಾತನಾಡಿ, ನಮ್ಮ ಸಮಸ್ಯೆಗಳತ್ತ ಕ್ಷೇತ್ರದ ಶಾಸಕರು ಗಮನಹರಿಸಬೇಕು. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಮದ್ಯ ಮಾರಾಟ ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದಳು.
Advertisement
ಗ್ರಾಮದ ಮಹಿಳೆಯೊಬ್ಬರು ಮಾತನಾಡಿ, ಮದ್ಯದಿಂದ ಹಲವು ಕುಟುಂಬಗಳು ಬೀದಿಗೆ ಬರುವಂತಾಗಿದೆ. ಕುಡಿತದಿಂದಾಗಿ ಕುಟುಂಬಗಳು ಹಾಳಾಗುತ್ತಿವೆ. ದುಡಿದ ಹಣ ಮದ್ಯದಂಗಡಿಯ ಪಾಲಾಗುತ್ತಿದ್ದು, ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಹೇಳಿದರು. ಪ್ರತಿಭಟನಾ ಸ್ಥಳಕ್ಕೆ ಮೇಲಧಿಕಾರಿಗಳು ಆಗಮಿಸಿ ಮನವಿ ಆಲಿಸಿದ ನಂತರ ತಾತ್ಕಾಲಿಕವಾಗಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ವಾಪಸ್ ಪಡೆದರು.