ನವದೆಹಲಿ: ಭಾರತದಲ್ಲಿ ಉತ್ಪಾದನೆಯಾದ ಐಫೋನ್‌ಗಳಿಗೆ (iPhone) ಡೊನಾಲ್ಡ್ ಟ್ರಂಪ್ 25% ತೆರಿಗೆ ವಿಧಿಸಿದರೂ ಅಮೆರಿಕದಲ್ಲಿ (USA) ಉತ್ಪಾದನೆಯಾದ ಐಫೋನ್‌ಗಳಿಗೆ ಹೋಲಿಕೆ ಮಾಡಿದರೆ ದರ ಕಡಿಮೆ ಇರಲಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಟೇಟಿವ್ (GTRI) ಹೇಳಿದೆ.
ಐಫೋನ್ ಉತ್ಪಾದನಾ ವೆಚ್ಚ ಅಮೆರಿಕಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ (India) ಬಹಳ ಕಡಿಮೆಯಿದೆ ಎಂದು ತಿಳಿಸಿದೆ.
ಡೊನಾಲ್ಡ್ ಟ್ರಂಪ್ (Donald Trump) ಅವರು ಭಾರತದಲ್ಲಿ ಉತ್ಪಾದನೆಯಾದ ಐಫೋನ್‌ಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಿದರೆ 25% ತೆರಿಗೆ ವಿಧಿಸುವುದಾಗಿ ಆಪಲ್ ಕಂಪನಿ ಎಚ್ಚರಿಕೆ ನೀಡಿದ್ದಾರೆ. ಆಪಲ್ ಚೀನಾದಲ್ಲಿ ಐಫೋನ್ ಘಟಕ ತೆಗೆದ ಬಳಿಕ ಚೀನಾ ಅಭಿವೃದ್ಧಿಯಾಗಿದೆ. ಭಾರತದಲ್ಲಿ ತಮ್ಮ ಆಪಲ್ ಉದ್ಯಮವನ್ನು ವಿಸ್ತರಿಸುವುದಕ್ಕೆ ನನ್ನ ಆಕ್ಷೇಪವಿದೆ. ಭಾರತವು ತನ್ನನ್ನು ತಾನು ನೋಡಿಕೊಳ್ಳುವ ದೇಶವಾಗಿದೆ. ನೀವ್ಯಾಕೆ ಅಮೆರಿಕದಲ್ಲಿ ಘಟಕವನ್ನು ತೆರೆಯಬಾರದು ಎಂದು ಸಿಇಒ ಟಿಮ್ ಕುಕ್ ಅವರನ್ನು ಟ್ರಂಪ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್ ಕಳುಹಿಸಿದ ಆಪಲ್
ಭಾರತದಲ್ಲಿ ವೆಚ್ಚ ಕಡಿಮೆ ಯಾಕೆ?
ಭಾರತದಲ್ಲಿ ಫೋನ್ ಬಿಡಿ ಭಾಗಗಳಲ್ಲಿ ಜೋಡಿಸುವರಿಗೆ ತಿಂಗಳಿಗೆ 230 ಡಾಲರ್ (ಅಂದಾಜು 20 ಸಾವಿರ ರೂ.) ವೇತನ ಇದೆ. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇದೇ ಕೆಲಸ ಮಾಡುವವರಿಗೆ ತಿಂಗಳಿಗೆ 2,900 ಡಾಲರ್ ವೇತನ (2.46 ಲಕ್ಷ ರೂ.)ಪಾವತಿಸಬೇಕಾಗುತ್ತದೆ.
ಭಾರತದಲ್ಲಿ ಒಂದು ಐಫೋನ್ ಜೋಡಣೆಗೆ ಅಂದಾಜು 30 ಡಾಲರ್ (2,500 ರೂ.) ಖರ್ಚಾದರೆ ಅಮೆರಿಕದಲ್ಲಿ ಒಂದು ಐಫೋನ್ ಜೋಡನೆಗೆ 390 ಡಾಲರ್ (33,200 ರ.) ವೆಚ್ಚವಾಗಲಿದೆ. ಅಷ್ಟೇ ಅಲ್ಲದೇ ಭಾರತ ಸರ್ಕಾರ Production Linked Incentive (PLI) ಅಡಿ ಹಲವು ರಿಯಾಯಿತಿಗಳು ಸಹ ಸಿಗುತ್ತಿದೆ.
ಒಂದು ವೇಳೆ ಆಪಲ್ ತನ್ನ ಐಫೋನ್ ಜೋಡಣೆಯನ್ನು ಅಮೆರಿಕಕ್ಕೆ ಸ್ಥಳಾಂತರಿಸಿದರೆ, ಪ್ರತಿ ಐಫೋನ್‌ನ ಲಾಭವು ಪ್ರತಿ ಯೂನಿಟ್‌ಗೆ 450 ಡಾಲರ್‌ನಿಂದ ಕೇವಲ 60 ಡಾಲರ್‌ಗೆ ಇಳಿಯಲಿದೆ. ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾದರೆ ಐಫೋನ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಬೇಕಾಗುತ್ತದೆ.
ಭಾರತಕ್ಕೆ ಎಷ್ಟು ಹಣ ಸಿಗುತ್ತೆ?
1,000 ಡಾಲರ್ ಮೌಲ್ಯದ ಒಂದು ಐಫೋನ್‌ನಿಂದಾಗಿ ಹಲವು ದೇಶಗಳಿಗೆ ಆದಾಯ ಸಿಗುತ್ತದೆ. ಆಪಲ್ ಕಂಪನಿ 450 ಡಾಲರ್ ಲಾಭ ಪಡೆದರೆ ಅಮೆರಿಕದ ಕ್ವಾಲ್ಕಾಮ್ ಮತ್ತು ಬ್ರಾಡ್‌ಕಾಮ್ ಸುಮಾರು 80 ಡಾಲರ್ ಪಡೆಯುತ್ತದೆ. ಚಿಪ್ ತಯಾರಿಕೆಯಿಂದ ತೈವಾನ್‌ಗೆ 150 ಡಾಲರ್, OLED ಪರದೆಗಳು ಮತ್ತು ಮೆಮೊರಿ ಚಿಪ್‌ಗಳಿಂದಾಗಿ ದಕ್ಷಿಣ ಕೊರಿಯಾಗೆ 90 ಡಾಲರ್, ಕ್ಯಾಮೆರಾ ಲೆನ್ಸ್‌ನಿಂದಾಗಿ ಜಪಾನ್ 85 ಡಾಲರ್ ಪಡೆಯುತ್ತದೆ.
ಭಾರತ ಮತ್ತು ಚೀನಾ ಜೋಡಿಸುವ ಪ್ರತಿ ಯೂನಿಟ್‌ಗೆ ಸುಮಾರು 30 ಡಾಲರ್ (2,500 ರೂ.) ಗಳಿಸುತ್ತವೆ. ಇದು ಐಫೋನ್‌ನ ಚಿಲ್ಲರೆ ಮೌಲ್ಯದ 3% ಕ್ಕಿಂತ ಕಡಿಮೆ. ಆದರೆ ಐಫೋನ್ ಜೋಡಣೆಯಿಂದಾಗಿ ಭಾರತದಲ್ಲಿ ಸುಮಾರು 60,000 ಉದ್ಯೋಗ ಸೃಷ್ಟಿಯಾದರೆ ಚೀನಾದಲ್ಲಿ 3,00,000 ಉದ್ಯೋಗ ಸೃಷ್ಟಿಯಾಗಿದೆ.