ಬಟ್ಲರ್‌ ಬೊಂಬಾಟ್‌ ಫಿಫ್ಟಿ; ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನ – ಗುಜರಾತ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

Public TV
3 Min Read
RCB vs GT 1

ಬೆಂಗಳೂರು: ಜೋಸ್‌ ಬಟ್ಲರ್‌ (Jos Buttler) ಬೊಂಬಾಟ್‌ ಅರ್ಧಶತಕ, ಮೊಹಮ್ಮದ್‌ ಸಿರಾಜ್‌ (Mohammed Siraj) ಬೆಂಕಿ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಗುಜರಾತ್‌ ಟೈಟಾನ್ಸ್‌ (Gujarat Titans) 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್‌ ಗೆಲುವಿನ ಕನಸು ಕಂಡಿದ್ದ ಆರ್‌ಸಿಬಿ ಆಸೆಗೆ ತಣ್ಣೀರು ಎರಚಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 169 ರನ್‌ ಗಳಿಸಿತ್ತು. 170 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್‌ ಟೈಟಾನ್ಸ್‌ 17.5 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 170 ರನ್‌ ಗಳಿಸಿ ಗೆಲುವು ಸಾಧಿಸಿತು.

ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿದ ಗುಜರಾತ್‌ ಟೈಟಾನ್ಸ್‌ 4.4 ಓವರ್‌ಗಳಲ್ಲಿ 32 ರನ್‌ ಗಳಿಸಿದ್ದಾಲೇ ತನ್ನ ಮೊದಲ ವಿಕೆಟ್‌ ಕಳೆದುಕೊಂಡಿತು. ಈ ವೇಳೆ 2ನೇ ವಿಕೆಟ್‌ಗೆ ಜೊತೆಗೂಡಿದ ಸಾಯಿ ಸುದರ್ಶನ್‌ (Sai Sudharsan) ಹಾಗೂ ಜೋಸ್‌ ಬಟ್ಲರ್‌ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. 2ನೇ ವಿಕೆಟಿಗೆ ಈ ಜೋಡಿ 47 ಎಸೆತಗಳಲ್ಲಿ 75 ರನ್‌ಗಳ ಜೊತೆಯಾಟ ನೀಡಿತು. ಇದಾದ ಬಳಿಕ ಮುರಿಯದ 3ನೇ ವಿಕೆಟಿಗೆ ಬಟ್ಲರ್‌ – ರುದರ್ಫೋರ್ಡ್ 36 ರನ್‌ (32 ಎಸೆತ) ಜೊತೆಯಾಟದಿಂದ ಟೈಟಾನ್ಸ್‌ ಪಡೆ ಸುಲಭ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

RCB

ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌:
ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಜೋಸ್‌ ಬಟ್ಲರ್‌ 3ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಬ್ಬರಿಸಿ ಬೊಬ್ಬರಿದರು. 31 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ ಸಹಿತ ಅರ್ಧಶತಕ ಸಿಡಿಸಿದ್ದ ಬಟ್ಲರ್‌ ಒಟ್ಟು 39 ಎಸೆತಗಳಲ್ಲಿ 73 ರನ್‌ (6 ಸಿಕ್ಸ್‌, 5 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಇದರೊಂದಿಗೆ ಆರಂಭಿಕ ಆಟಗಾರ ಸಾಯಿ ಸುದರ್ಶನ್‌ 49 ರನ್‌ (36 ಎಸೆತ, 7 ಬೌಂಡರಿ, 1 ಸಿಕ್ಸರ್‌), ಸ್ಫೋಟಕ ಪ್ರದರ್ಶನ ನೀಡಿದ ಶೆರ್ಫೇನ್ ರುದರ್ಫೋರ್ಡ್ 18 ಎಸೆತಗಳಲ್ಲಿ 30 ರನ್‌ (3 ಸಿಕ್ಸರ್, 1 ಬೌಂಡರಿ), ನಾಯಕ ಶುಭಮನ್‌ ಗಿಲ್‌ 14 ರನ್‌ ಕೊಡುಗೆ ನೀಡಿದರು.

GT

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 169 ರನ್‌ಗಳನ್ನು ಬಾರಿಸುವ ಮೂಲಕ ಗುಜರಾತ್‌ಗೆ 170 ಸಾಧಾರಣ ರನ್‌ಗಳ ಗುರಿ ನೀಡಿತು. ಆರಂಭಿಕರಾಗಿ ಕಣಕ್ಕಿಳಿಸಿದ್ದ ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌ ಸ್ಫೋಟಕ ಪ್ರದರ್ಶನ ನೀಡಲು ಮುಂದಾಗಿದ್ದರು. ಆದ್ರೆ ಒಂದೆಡೆ ರನ್‌ ಕಲೆ ಹಾಕುತ್ತಿದ್ದಂತೆ ಮತ್ತೊಂದೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಪವರ್‌ ಪ್ಲೇನಲ್ಲೇ ವೇಗಿ ಮೊಹಮ್ಮದ್‌ ಸಿರಾಜ್‌ ಫಿಲ್‌ ಸಾಲ್ಟ್‌ ಹಾಗೂ ದೇವದತ್‌ ಪಡಿಕಲ್‌ ವಿಕೆಟ್‌ ಕಿತ್ತಿದ್ದು, ಆರ್‌ಸಿಬಿಗೆ ಬಹುದೊಡ್ಡ ಹೊಡೆತ ನೀಡಿತು.

GT 02

ಲಿವಿಂಗ್‌ಸ್ಟೋನ್‌ ಅಮೋಘ ಅರ್ಧಶತಕ:
ಬಳಿಕ ಕಣಕ್ಕಿಳಿದು ತಾಳ್ಮೆಯ ಆಟ ಆಡಿದ ಲಿಯಾಮ್ ಲಿವಿಂಗ್‌ಸ್ಟೋನ್ ಆಕರ್ಷಕ ಅರ್ಧಶತಕ ಸಿಡಿಸಿದರು. 40 ಎಸೆತಗಳಲ್ಲಿ 54 ರನ್‌ (5 ಸಿಕ್ಸರ್‌, 1 ಬೌಂಡರಿ) ಚಚ್ಚಿದ್ದರು. ಇವರಿಗೆ ಉತ್ತಮ ಸಾಥ್‌ ನೀಡಿದ ಜಿತೇಶ್‌ ಶರ್ಮಾ 33 ರನ್‌ (21 ಎಸೆತ, 1 ಸಿಕ್ಸರ್‌, 5 ಬೌಂಡರಿ) ಗಳಿಸಿ ಔಟಾಗಿ ಪೆವಿಲಿಯನ್‌ನತ್ತ ತೆರಳಿದರು. ಇನ್ನು ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಟಿಂ ಡೇವಿಡ್‌ 16 ರನ್‌ ಚಚ್ಚಿ 170 ರನ್‌ಗಳ ಗುರಿ ನೀಡುವಲ್ಲಿ ಯಶಸ್ವಿಯಾದರು.

ಮತ್ತೊಂದೆಡೆ ಗುಜರಾತ್‌ ಪರ ಬೌಲಿಂಗ್‌ನಲ್ಲಿ ಮೊಹಮ್ಮದ್‌ ಸಿರಾಜ್‌ 3 ವಿಕೆಟ್‌ ಪಡೆದರೆ, ಸಾಯಿ ಕಿಶೋರ್‌ 2 ವಿಕೆಟ್‌, ಪ್ರಸಿದ್‌ ಕೃಷ್ಣ, ಅರ್ಷದ್‌ ಖಾನ್‌ ಮತ್ತು ಇಶಾಂತ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

Share This Article