– 1.70 ಕೋಟಿ ರೂ. ತೆರಿಗೆ ಬಾಕಿ – ಬಿಬಿಎಂಪಿ ನೋಟಿಸ್ ಬಗ್ಗೆ ಮಾಲೀಕರು ಹೇಳಿದ್ದೇನು?
– ಇದರಲ್ಲಿ ರಾಜಕೀಯವಿಲ್ಲ: ಮಾಲೀಕ ಪ್ರಶಾಂತ್
ಬೆಂಗಳೂರು: ರೈತರೊಬ್ಬರಿಗೆ (Farmer) ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸ್ವಯಂ ಪ್ರೇರಿತವಾಗಿ ಜಿ.ಟಿ ಮಾಲ್ (GT Mall) ಬಂದ್ ಮಾಡುವ ನಿರ್ಧಾರವನ್ನು ಮಾಲೀಕ ಪ್ರಶಾಂತ್ ಕೈಗೊಂಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಾವೇರಿ ಮೂಲದ ರೈತ ಫಕೀರಪ್ಪ ಅವರಿಗೆ ಅಪಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಪಂಚೆ ಧರಿಸಿ ಬಂದಿದ್ದಕ್ಕೆ ಸಿಬ್ಬಂದಿ ಮಾಲ್ ಒಳಗೇ ಬಿಡದೇ ಅಪಮಾನ ಮಾಡಿದ್ದರು. ಈ ಪ್ರಕರಣ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ವಿಧಾನಸಭೆಯ ಅಧಿವೇಶನದಲ್ಲೂ ಸಚಿವ ಬೈರತಿ ಸುರೇಶ್ ಅವರು ಮಾಲ್ ಮುಚ್ಚಿಸುತ್ತೇವೆ ಎಂದು ಪ್ರಸ್ತಾಪಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಮಾಲೀಕರು ಸ್ವಯಂಪ್ರೇರಿತವಾಗಿ ಮಾಲ್ ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: ಮದ್ಯದ ಅಂಗಡಿಗೆ ಪರವಾನಗಿ ನೀಡಲು ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದಾರೆ – ಕಾಂಗ್ರೆಸ್ ಸದಸ್ಯ ಬಾಂಬ್!
ಈ ಕುರಿತು `ಪಬ್ಲಿಕ್ ಟಿವಿ’ (Public TV) ಜೊತೆಗೆ ಮಾತನಾಡಿದ ಜಿ.ಟಿ ಮಾಲ್ ಮಾಲೀಕ ಪ್ರಶಾಂತ್ (Prashanth), ನಮ್ಮ ಮಾಲ್‌ನಲ್ಲಿ ಆಗಬಾರದಂತಹ ಘಟನೆ ಆಗಿದೆ. ಅದು ಹೊಸ ಸಿಬ್ಬಂದಿಯಿಂದ ಆಗಿದೆ. ನಾನು ಮಾಲ್ ಮಾಲೀಕನಾಗಿ ಆ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ. ಇದನ್ನ 2 ದಿನಗಳ ಹಿಂದೆಯೇ ಕ್ಷಮೆ ಕೇಳಬೇಕಾಗಿತ್ತು. ನಮ್ಮ ತಂದೆ ಅನಾರೋಗ್ಯದ ವಿಚಾರವಾಗಿ ಸ್ಪಲ್ವ ಆಸ್ಪತ್ರೆಯಲ್ಲಿದ್ದೆವು. ರೈತ ಫಕೀರಪ್ಪ ಅವ್ರಿಗೆ ನಮ್ಮಿಂದ ಆಗಿರೋದ ತಪ್ಪು. ನನ್ನ ತಂದೆ ಕೂಡ ಫಕೀರಪ್ಪ ಜೊತೆಗೆ ಫೋನ್ ಕಾಲ್ ಮಾಡಿ ಕ್ಷಮೆ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 7 ದಿನಗಳ ಕಾಲ ಜಿ.ಟಿ ಮಾಲ್ ಮುಚ್ಚಿಸುತ್ತೇವೆ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಘೋಷಣೆ
1.70 ಕೋಟಿ ತೆರಿಗೆ ಬಾಕಿ:
ಮುಂದುವರಿದು ಮಾತನಾಡಿದ ಅವರು, ಬಿಬಿಎಂಪಿಯಿಂದ (BBMP) ನೋಟಿಸ್ ಬಂದಿದೆ. ಆದ್ರೆ ಮಾಲ್ ಬಂದ್ ಮಾಡುವಂತೆ ಹೇಳಿಲ್ಲ. ಘಟನೆ ಬಗ್ಗೆ ವರದಿ ನೀಡಿ ಎಂದು ನೀಡಿದ್ದಾರೆ ಎಂದರು. ಇದೇ ವೇಳೆ ಮಾಲ್ ತೆರಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 1 ವರ್ಷದ ತೆರಿಗೆ ಬಾಕಿಯಿದೆ. 1.70 ಕೋಟಿ ರೂ. ಬಾಕಿ ಇದೆ. ಆದ್ರೆ ತೆರಿಗೆ ವಿಚಾರಕ್ಕೂ ಮಾಲ್ ಬಂದ್ ಮಾಡುತ್ತಿಲ್ಲ. ನಮ್ಮ ಕಡೆಯಿಂದ ತಪ್ಪಾಗಿದೆ, ಹಾಗಾಗಿ ನಾವು ಮಾಲ್ ಕ್ಲೋಸ್ ಮಾಡ್ತಿದ್ದೇವೆ. 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಹೇಳಿದ್ದಾರೆ. ನಾವು ಇನ್ನೂ ಎರಡ್ಮೂರು ದಿನ ಮಾಲ್ ಕ್ಲೋಸ್ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನಟ ದರ್ಶನ್ & ಗ್ಯಾಂಗ್‌ಗೆ ಆ.1ರ ವರೆಗೆ ಜೈಲೇ ಗತಿ – ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ
ಇದರಲ್ಲಿ ರಾಜಕೀಯ ಇಲ್ಲ:
ಮಾಲ್ ಬಂದ್ ಮಾಡುವ ವಿಚಾರದಲ್ಲಿ ಯಾವುದೇ ರಾಜಕೀಯ ನಡೆದಿಲ್ಲ. ನಮ್ಮ ಕಡೆಯಿಂದ ತಪ್ಪಾಗಿದೆ. ಫಕೀರಪ್ಪ ಅವ್ರಿಗೆ ಆಗಿರೋದಕ್ಕೆ ನೈತಿಕ ಹೊಣೆ ನಮ್ಮದೇ. ಮಾಲ್ ಎಷ್ಟು ದಿನ ಬಂದ್ ಆಗುತ್ತೆ ಗೊತ್ತಿಲ್ಲ. ಸೆಷನ್‌ನಲ್ಲಿ 7 ದಿನ ಬಂದ್ ಮಾಡುತ್ತೇವೆ ಅಂತ ಹೇಳಿದ್ದಾರೆ. ಗುರುವಾರ ಮಧ್ಯಾಹ್ನದ ಬಳಿಕವೇ ನಾವು ಈ ನಿರ್ಧಾರ ಕೈಗೊಂಡಿರೋದು, ಮಾಲ್ 7 ದಿನ ಬಂದ್ ಆಗಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ