ಬೆಂಗಳೂರು: ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನವಾಗುವ ಲಕ್ಷಣ ಕಾಣುತ್ತಿದೆ. ಸರ್ಕಾರ ಬಿದ್ದ ಮೇಲೆ ಪಕ್ಷದಿಂದ ಬಹುತೇಕ ದೂರವೇ ಉಳಿದಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರುವ ಸಾಧ್ಯತೆ ಇದೆ.
ಹುಣಸೂರು ಉಪ ಚುನಾವಣೆಯ ಬಿಜೆಪಿ ಟಿಕೆಟ್ ಅನ್ನು ತಮ್ಮ ಮಗನಿಗೆ ನೀಡುವಂತೆ ಕೇಸರಿ ಪಡೆಯ ನಾಯಕರಿಗೆ ಜಿ.ಟಿ.ದೇವೇಗೌಡ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಟಿಕೆಟ್ ಸಿಕ್ಕರೆ ಮಾಜಿ ಸಚಿವರು ಜೆಡಿಎಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸೇರುವುದು ಪಕ್ಕಾ ಆಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಈ ನಿಟ್ಟಿನಲ್ಲಿ ಜಿ.ಟಿ.ದೇವೇಗೌಡ ಅವರು ಈಗಾಗಲೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಅವರ ಮೂಲಕ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ನಾಯಕರ ಜೊತೆಯೂ ಸಂಪರ್ಕದಲ್ಲಿ ಇದ್ದಾರೆ. ಹುಣಸೂರು ಕ್ಷೇತ್ರದಿಂದ ಅನರ್ಹ ಶಾಸಕ ಎಚ್.ವಿಶ್ವನಾಥ್ ಸ್ಪರ್ಧೆ ಮಾಡುವುದು ಬಹುತೇಕ ಡೌಟ್. ಹೀಗಾಗಿ ತಮ್ಮ ಮಗನಿಗೆ ಟಿಕೆಟ್ ಕೊಡುವಂತೆ ಬಿಜೆಪಿ ನಾಯಕರಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಬಿಜೆಪಿ ನಾಯಕರು ಜಿ.ಟಿ.ದೇವೇಗೌಡ ಅವರ ಮನವಿಗೆ ಒಪ್ಪಿದರೆ ಬಹುತೇಕ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇತ್ತ ಬಿಜೆಪಿಯು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಟಿಕೆಟ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಜಿಟಿ ದೇವೇಗೌಡ ಅವರಿಗೆ ತಿಳಿಸಿದೆ. ಹೀಗಾಗಿ ಬುಧವಾರ ಹೊರ ಬೀಳಲಿರುವ ಅನರ್ಹ ಶಾಸಕರ ಪ್ರಕರಣದ ತೀರ್ಪಿನ ಮೇಲೆ ಜಿಟಿ ದೇವೇಗೌಡ ಅವರ ಬೇಡಿಕೆ ನಿರ್ಧಾರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಿ.ಟಿ.ದೇವೇಗೌಡ ಅವರು ವಾರದ ಹಿಂದಷ್ಟೇ ಕಂದಾಯ ಸಚಿವ ಆರ್.ಅಶೋಕ್ ಅವರ ಮನೆಗೆ ನೀಡಿದ್ದರು. ಈ ವೇಳೆ ಬಿಜೆಪಿ ಸೇರ್ಪಡೆ ಕುರಿತ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದರು. ಉಪಚುನಾವಣೆಗೂ ಮುನ್ನ ಪಕ್ಷ ಸೇರ್ಪಡೆಗೊಂಡರೆ ಬಿಜೆಪಿಗೆ ಬಲ ಸಿಗುತ್ತದೆ. ಜೊತೆಗೆ ಮಗನ ರಾಜಕೀಯ ಭವಿಷ್ಯಕ್ಕೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರವನ್ನು ಮಾಜಿ ಸಚಿವರು ಹಾಕಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.