ಮುಂಬೈ: ಜಿಎಸ್‌ಟಿ ದರ ಪರಿಷ್ಕರಣೆ (GST Cuts) ಹಿನ್ನೆಲೆ ಕಾರುಗಳ ಬೆಲೆ ಇಳಿಕೆಯಾಗಿದ್ದು, ಖರೀದಿ ಭರಾಟೆ ಜೋರಾಗಿದೆ. ನವರಾತ್ರಿಯ ಮೊದಲ ದಿನದಂದೇ ಮಾರುತಿ ಸುಜುಕಿ 30,000 ಹಾಗೂ ಹ್ಯುಂಡೈ 11,000 ಕಾರುಗಳನ್ನು ಭರ್ಜರಿ ಸೇಲ್ ಮಾಡಿವೆ.
ಜಿಎಸ್ಟಿ ಪ್ರಯೋಜನಗಳನ್ನು ಸಂಪೂರ್ಣವಾಗಿ ರವಾನಿಸುವ ಮೊದಲ ವಾಹನ ಕಂಪನಿಗಳಲ್ಲಿ ಒಂದಾಗಿ, ನಮ್ಮ ಗ್ರಾಹಕರ ಆಚರಣೆಯನ್ನು ಇನ್ನಷ್ಟು ಹರ್ಷದಿಂದ ಮಾಡಲು ನಾವು ಸಂತೋಷಪಡುತ್ತೇವೆ. ಗ್ರಾಹಕರಿಂದ ನಿರಂತರ ಹಬ್ಬದ ಬೇಡಿಕೆ ಬರುವ ನಿರೀಕ್ಷೆಯಿದೆ ಎಂದು ಹೆಚ್‌ಎಂಐಎಲ್‌ನ ಸಿಒಒ ಮತ್ತು ನಿರ್ದೇಶಕ ತಾರೂನ್ ಗಾರ್ಗ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಜಿಎಸ್ಟಿ ದರ ಕಡಿತದಿಂದಾಗಿ ಗ್ರಾಹಕರಲ್ಲಿ ಖರೀದಿ ಉತ್ಸಾಹ ಹೆಚ್ಚಾಗಿದೆ. ಗ್ರಾಹಕರು ತಮ್ಮ ಆದ್ಯತೆಯ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಧಾವಿಸುತ್ತಿದ್ದಾರೆ. ‘ನವರಾತ್ರಿ ಮೊದಲ ದಿನ ಸುಮಾರು 80,000 ಗ್ರಾಹಕರ ನಮ್ಮ ಕಂಪನಿ ಕಾರುಗಳ ಬಗ್ಗೆ ವಿಚಾರಿಸಿ ತಿಳಿದುಕೊಂಡಿದ್ದಾರೆ. ಕಡಿಮೆ ಬೆಲೆಗಳೊಂದಿಗೆ ಸಣ್ಣ ಕಾರುಗಳಿಗೆ ಬುಕಿಂಗ್ ಸಂಖ್ಯೆಯಲ್ಲಿ ಶೇ.50 ರಷ್ಟು ಹೆಚ್ಚಳ ಕಂಡುಬಂದಿದೆ’ ಎಂದು ಮಾರುತಿ ಸುಜುಕಿ ತಿಳಿಸಿದೆ.
ಕಾರು ವಿತರಕರು ಜಿಎಸ್ಟಿ ಸುಧಾರಣೆಗಳನ್ನು ಸ್ವಾಗತಿಸಿದೆ. ಬದಲಾವಣೆಗಳು ಖರೀದಿ ಶಕ್ತಿಯನ್ನು ಹೆಚ್ಚಿಸುತ್ತದೆ. ಆರ್ಥಿಕತೆಗೆ ದೊಡ್ಡ ಬೂಸ್ಟ್ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಬ್ಬದ ಋತುವಿನಲ್ಲೇ ಜಿಎಸ್ಟಿ ದರ ಪರಿಷ್ಕರಣೆ ಕ್ರಮಕೈಗೊಂಡ ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಉಳಿತಾಯ ಹಬ್ಬ| ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?