ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪರಾಕ್ರಮ ಮುಂದುವರಿದಿದ್ದು, ಹವಾಮಾನ ದತ್ತಾಂಶ, ಉಪಗ್ರಹ ಆಧರಿತ ಶೋಧ ಸೇವೆಗೆ ಬಳಕೆಯಾಗುವ ಜಿಸ್ಯಾಟ್-17 ಉಡಾವಣೆ ಯಶಸ್ವಿಯಾಗಿದೆ.
ಫ್ರೆಂಚ್ ಗಯಾನದ ಕೌರೌ ಉಡಾವಣಾ ಕೇಂದ್ರದಿಂದ ಭಾರತೀಯ ಕಾಲಮಾನ ನಸುಕಿನ ಜಾವ 2.30ರ ವೇಳೆಗೆ 3,477 ಕೆ.ಜಿ ತೂಕದ ಜಿಸ್ಯಾಟ್-17 ಉಪಗ್ರಹವನ್ನು ಹೊತ್ತಕೊಂಡು ಏರಿಯಾನ್ 5 ರಾಕೆಟ್ ನಭಕ್ಕೆ ಹಾರಿತ್ತು.
Advertisement
ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ.
Advertisement
ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋ ಉಡಾವಣೆ ಮಾಡಿದ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜೂನ್ 5ರಂದು ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಮೂಲಕ ಜಿಸ್ಯಾಟ್ -19 ಉಪಗ್ರಹಗಳು ಕಕ್ಷೆಗೆ ಸೇರಿದ್ದರೆ, ಜೂನ್ 23 ರಂದು ಪಿಎಸ್‍ಎಲ್‍ವಿ ಸಿ38 ರಾಕೆಟ್ ಮೂಲಕ ಕಾರ್ಟೋಸ್ಯಾಟ್ 2 ಉಪಗ್ರಹ ಕಕ್ಷೆ ಸೇರಿತ್ತು.
Advertisement
ವಿದೇಶದಿಂದ ಉಪಗ್ರಹ ಉಡಾವಣೆ ಮಾಡಿದ್ದು ಯಾಕೆ?
ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಉಡಾವಣೆ ಯಶಸ್ವಿಯಾಗುವುದಕ್ಕೂ ಮೊದಲು ಇಸ್ರೋ ತೂಕದ ಉಪಗ್ರಹಗಳ ಉಡಾವಣೆಗಾಗಿ ವಿದೇಶಿ ಸಂಸ್ಥೆಗಳನ್ನು ಅವಲಂಬಿಸಿತ್ತು. ಈ ಕಾರಣಕ್ಕೆ ಮೊದಲೇ ಒಪ್ಪಂದವಾಗಿದ್ದ ಹಿನ್ನೆಲೆಯಲ್ಲಿ ಇಸ್ರೋ 3,477 ಕೆ.ಜಿ ತೂಕದ ಉಪಗ್ರಹವನ್ನು ಫ್ರೆಂಚ್ ಗಯಾನ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಿದೆ.
Advertisement
ಇನ್ನು ಮುಂದೆ ಅವಲಂಬನೆ ಅಗತ್ಯವಿಲ್ಲ:
ಇಸ್ರೋ ಹೆಚ್ಚಾಗಿ ತನ್ನ ಉಪಗ್ರಹಗಳನ್ನು ಉಡಾವಣೆ ಮಾಡಲು ಪಿಎಸ್‍ಎಲ್‍ವಿ(ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್), ಮತ್ತು ಜಿಎಸ್‍ಎಲ್‍ವಿ(ಜಿಯೋಸಿಂಕ್ರೋನಾಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಬಳಕೆ ಮಾಡುತ್ತದೆ. ಪಿಎಸ್‍ಎಲ್‍ವಿ 1500 ಕೆಜಿ ತೂಕ ಸಾಮರ್ಥ್ಯದ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ 4 ಸಾವಿರ ಕೆಜಿ ತೂಕದ ಉಪಗ್ರಹವನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. 640 ಟನ್ ತೂಕದ ಈ ರಾಕೆಟ್ ಪ್ರಯಾಣಿಕರಿಂದ ತುಂಬಿರುವ 5 ಜಂಬೋ ವಿಮಾನಗಳ ತೂಕಕ್ಕೆ ಸಮವಾಗಿದ್ದು, ಜೂನ್ 5ರಂದು ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಮೂಲಕ 3136 ಕೆಜಿ ತೂಕದ ಜಿಸ್ಯಾಟ್ -19 ಉಪಗ್ರಹಗಳು ಕಕ್ಷೆಗೆ ಸೇರಿತ್ತು.
ಮೇ 5 ರಂದು ಜಿಎಸ್‍ಎಲ್‍ವಿ ಮಾರ್ಕ್ 2 ರಾಕೆಟ್‍ನೊಂದಿಗೆ 2,230 ಕೆಜಿ ತೂಕದ ದಕ್ಷಿಣ ಏಷ್ಯಾ ಉಪಗ್ರಹ ಜಿಸ್ಯಾಟ್ 9 ಉಡಾವಣೆಯನ್ನು ಇಸ್ರೋ ಮಾಡಿತ್ತು.
ಇದನ್ನೂ ಓದಿ: ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!
GSAT-17 successfully launched by Ariane-5 VA-238 from Kourou, French Guianahttps://t.co/yOrCnpjgON pic.twitter.com/uloiIWJjwj
— ISRO (@isro) June 29, 2017