ತುಮಕೂರಲ್ಲಿ ಫಲಿಸದ ಮೈತ್ರಿ – ದೇವೇಗೌಡರಿಗೆ ಸೋಲು

Public TV
2 Min Read
HDD 1

ತುಮಕೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಳೆದು-ತೂಗಿ ಕೊನೆಯದಾಗಿ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸ್ಪರ್ಧಿಸಿದ್ದರು. ಆದರೆ ಇಂದಿನ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ದೇವೇಗೌಡರ ವಿರುದ್ಧ 12,887 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು 5,96,231 ಮತಗಳನ್ನು ಪಡೆದಿದ್ದರೆ, ದೇವೇಗೌಡರು 5,83,344 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಬಸವರಾಜು ಅವರು 12,887 ಬಹುಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.

hdd

ಬಸವರಾಜು ಗೆಲುವಿಗೆ ಕಾರಣ?
ನಾಲ್ಕು ಬಾರಿ ಸಂಸದರಾಗಿ 30 ವರ್ಷಗಳ ನಿರಂತರ ರಾಜಕೀಯ ಅನುಭವಿರುವ ಜಿ.ಎಸ್ ಬಸವರಾಜುಗೆ ಕ್ಷೇತ್ರದಲ್ಲಿ ಉತ್ತಮ ಸಂಪರ್ಕ ಹೊಂದಿದ್ದರು. ಪ್ರತಿ ಹಳ್ಳಿ ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ವಿಶ್ವಾಸಾರ್ಹ ಮುಖಂಡರ ಸಂಪರ್ಕ ಹೊಂದಿದ್ದರು.

ಮಧುಗಿರಿ-ಕೊರಟಗೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಅಸ್ಥಿತ್ವವೇ ಇಲ್ಲವಾಗಿತ್ತು. 60 ವರ್ಷಗಳಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಒಂದೇ ಒಂದು ಬಾರಿ ಗೆಲುವು ಸಾಧಿಸಿಲ್ಲ. ಆದರೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣರ ಕೃಪಾಕಟಾಕ್ಷ ಬಿಜೆಪಿ ಮೇಲಿತ್ತು. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ಅಸಮಧಾನ, ಶೀತಲ ಸಮರ, ಕೋಪ-ತಾಪಗಳು ಬಿಜೆಪಿಗೆ ಮತಗಳಾಗಿ ಪರಿವರ್ತನೆಯಾಗಿವೆ.

collage tmk 2

ಕೆ.ಎನ್ ರಾಜಣ್ಣ ತೆರೆಮರೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಜಿಲ್ಲೆಯಲ್ಲಿ ನಾಯಕ ಸಮುದಾಯದ ಪ್ರಬಲ ಮುಖಂಡನಾಗಿರುವ ಕೆ.ಎನ್ ರಾಜಣ್ಣ ನಾಯಕ ಸಮುದಾಯದ ಮತಗಳು ಬಿಜೆಪಿಗೆ ಬಿದ್ದಿವೆ. ಒಟ್ಟು 8 ಕ್ಷೇತ್ರಗಳಲ್ಲಿ 4 ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದು. ಅಲ್ಲದೆ ಮೋದಿ ಅಲೆ ಕೂಡ ವರ್ಕೌಟ್ ಆಗಿದೆ. ಮತ್ತೆ ದೇವೇಗೌಡರ ಮೇಲಿನ ಸಿಟ್ಟಿನಿಂದ ಕುರುಬರು ಮೈತ್ರಿ ಅಭ್ಯರ್ಥಿಗೆ ಮತಹಾಕದೇ ಬಿಜೆಪಿಗೆ ಹಾಕಿರುವ ಸಾಧ್ಯತೆ ಇದೆ. ಅದೇ ರೀತಿ ಗೊಲ್ಲಸಮುದಾಯದ ಮತ ಕೂಡಾ ಬಿಜೆಪಿ ಬುಟ್ಟಿಗೆ ಬಿದ್ದಿವೆ.

ದೇವೇಗೌಡರ ಸೋಲಿಗೆ ಕಾರಣ?
ಹೇಮಾವತಿ ನೀರನ್ನು ತುಮಕೂರು ಜಿಲ್ಲೆಗೆ ಕೊಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂಬ ವಿಚಾರ ಮತಗಳಿಗೆ ಹೊಡೆತ ಕೊಟ್ಟಿದೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನು ದೇವೇಗೌಡರು ಸೋಲಿಸಿದ್ದಾರೆ ಎಂಬ ಆರೋಪದಿಂದಾಗಿ ಕುರುಬ ಸಮುದಾಯದವರು ಮತಹಾಕಿಲ್ಲ. ಅದೇ ರೀತಿ ಕಳೆದ ಬಾರಿಯ ಅಭ್ಯರ್ಥಿ ಗೊಲ್ಲಸಮುದಾಯದ ಎ.ಕೃಷ್ಣಪ್ಪರ ಸಾವಿಗೆ ಜೆಡಿಎಸ್ ಕಾರಣ ಅನ್ನುವ ಗಂಭೀರ ಆರೋಪ ಕೂಡ ಇದೆ. ಇದರ ಪರಿಣಾಮ ಗೊಲ್ಲ ಸಮುದಾಯದವರು ಕೈ ಹಿಡಿದಿಲ್ಲ.

vlcsnap 2019 05 23 19h33m36s665

ಕೆ.ಎನ್.ರಾಜಣ್ಣ ಹಾಗೂ ಮುದ್ದಹನುಮೇಗೌಡರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಉಂಟಾಗಿತ್ತು. ಮುದ್ದಹನುಮೇಗೌಡ ತಟಸ್ಥವಾಗಿದ್ದರೂ ರಾಜಣ್ಣ ತೆರೆಮರೆಯಲ್ಲಿ ಬಿಜೆಪಿಗೆ ಸಹಕರಿಸಿದ್ದರು. ಬೇರೆ ಜಿಲ್ಲೆಯಿಂದ ಬಂದ ದೇವೇಗೌಡರಿಗೆ ಜಿಲ್ಲೆಯ ಜನತೆ ಅಷ್ಟೊಂದು ಮತ ಹಾಕಿಲ್ಲ. ಜೊತೆಗೆ ಕುಟುಂಬ ರಾಜಕಾರಣದ ವಿರೋಧವೂ ಇತ್ತು.

Share This Article
Leave a Comment

Leave a Reply

Your email address will not be published. Required fields are marked *