– ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಪರಿಷ್ಕರಣೆ ಇಲ್ಲ
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಪರಿಷ್ಕರಣೆ ಮಾಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗೃಹಲಕ್ಷ್ಮಿ ಯೋಜನೆಯು ಸದ್ಯ ಈಗ ಯಾವ ರೀತಿ ನಡೆದುಕೊಂಡು ಹೋಗುತ್ತಿದೆಯೋ ಹಾಗೆಯೇ ಮುಂದುವರೆದುಕೊಂಡು ಹೋಗಲಿದೆ. ಅದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅನುದಾನ ಸರಿಯಾಗಿ ಸದ್ಬಳಕೆ
ಕೆಲವೊಂದು ಇಲಾಖೆಗಳಲ್ಲಿ ಕಳೆದ ಬಜೆಟ್‌ನಲ್ಲಿ ನೀಡಿದ ಹಣವೇ ಖರ್ಚಾಗುತ್ತಿಲ್ಲವೆಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನನ್ನ ಇಲಾಖೆ ಇಷ್ಟು ವರ್ಷ ಬೇರೆ ರೀತಿಯಲ್ಲಿ ಇತ್ತು. ಆದರೆ, ಈಗ ಬಹುದೊಡ್ಡ ಗಾತ್ರದ ಬಜೆಟ್‌ನ್ನು ಒಳಗೊಂಡಂತಹ ಇಲಾಖೆಯಾಗಿದೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆ ಬಂದಿರುವುದರಿಂದ ಒಂದು ವರ್ಷಕ್ಕೆ ಸುಮಾರು 32 ಸಾವಿರ ಕೋಟಿ ರೂಪಾಯಿಯಷ್ಟು ಹಣವನ್ನು ಗೃಹಲಕ್ಷ್ಮಿಯರಿಗೆ ನೀಡಲಾಗುತ್ತಿದೆ. ನಮ್ಮ ಇಲಾಖೆಗೆ ನೀಡಿದ ಅನುದಾನ ಪೈಕಿ ಯಾವುದೇ ಅನುದಾನ ಉಳಿದಿಲ್ಲ. ಎಲ್ಲವೂ ಸರಿಯಾದ ರೀತಿಯಲ್ಲಿ ಖರ್ಚಾಗಿದೆ. ಶೇ.10 ರಷ್ಟು ಮಾತ್ರ ಅನುದಾನ ಮಿಕ್ಕಿರಬಹುದು. ಅದು ಕೂಡ ಮಾ.31 ರೊಳಗೆ ಖರ್ಚಾಗಲಿದೆ ಎಂದು ಹೇಳಿದರು.
ಸದ್ಯದಲ್ಲೇ ಜನವರಿ, ಫೆಬ್ರವರಿಯದ್ದು ಕ್ಲಿಯರ್
ಗೃಹಲಕ್ಷ್ಮಿ ಹಣ ಎರಡ್ಮೂರು ತಿಂಗಳಿಗೊಮ್ಮೆ ಬರುತ್ತದೆ ಎನ್ನುವುದು ತಪ್ಪು. ಸರ್ಕಾರ ಬಹುದೊಡ್ಡ ಯೋಜನೆ ಮಾಡಿದೆ. ನವೆಂಬರ್, ಡಿಸೆಂಬರ್ ತಿಂಗಳ ಹಣ ಕ್ಲಿಯರ್ ಆಗಿದೆ. ಜನವರಿ, ಫೆಬ್ರವರಿ ಸದ್ಯದಲ್ಲೇ ಕ್ಲಿಯರ್ ಆಗಲಿದೆ. ಹತ್ತು-ಹದಿನೈದು ದಿನ ಹೆಚ್ಚು ಕಡಿಮೆ ಆಗಬಹುದೇನೋ ವಿನಃ ಯಾವುದೇ ಕಾರಣಕ್ಕೂ ಕ್ಲಿಯರ್ ಆಗದೇ ಉಳಿಯುವುದಿಲ್ಲ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಯೋಜನೆ ಸ್ತಬ್ಧ
ನಮ್ಮ ನೆರೆಯ ಮಹಾರಾಷ್ಟ್ರ ರಾಜ್ಯವನ್ನು ನೋಡಿ, ಅಲ್ಲಿ ಚುನಾವಣೆಗೆ ಮುನ್ನ ಎರಡು ತಿಂಗಳ ದುಡ್ಡನ್ನು ಹಾಕಿದರು. ಅಲ್ಲಿನ ‘ಮಾಝಿ ಲಡಕಿ ಬಹಿನ್’ ಯೋಜನೆಗೆ ಹಣನೇ ಇಲ್ಲ. ಇಲ್ಲಿ ನಮ್ಮನ್ನು ಮಾತ್ರ ಬಿಜೆಪಿಯವರು ದೊಡ್ಡದಾಗಿ ಪ್ರಶ್ನೆ ಮಾಡುತ್ತಾರೆಂದು ಖಾರವಾಗಿ ಹೇಳಿದ ಸಚಿವರು, ನಮ್ಮ ಕರ್ನಾಟಕದಲ್ಲೇ ಗೃಹಲಕ್ಷ್ಮಿ ಹಣ ಸರಿಯಾಗಿ ತಲುಪಿಸುತ್ತಿರುವುದು. ಅದೇ ಮಹಾರಾಷ್ಟ್ರದಲ್ಲಿ ಚುನಾವಣೆಗಿಂತ ಮುಂಚೆ ಅಷ್ಟೇ ಹಾಕಿದ್ದರು. ಆದರೆ, ಚುನಾವಣೆ ನಂತರ ಯೋಜನೆ ಜಾರಿಗೊಳ್ಳದೆ ನಿಂತಿದೆ ಎಂದರು.
ಸಿಎಂ ಅವರಿಗೆ ಅಭಿನಂದನೆ
ಸಿಎಂ ಸಿದ್ದರಾಮಯ್ಯ ಅವರದು ಇದು ಕೊನೆಯ ಬಜೆಟ್ ಎಂದೆಲ್ಲ ಬಿಜೆಪಿಯವರು ಹೇಳುತ್ತಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾನಂತೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 16ನೇ ದಾಖಲೆ ಬಜೆಟ್ ಮಂಡಿಸಿದ್ದಾರೆ. ಕರ್ನಾಟಕದಲ್ಲಿ ಎಲ್ಲರನ್ನೂ ಒಳಗೊಂಡ ಸಮಗ್ರವಾದ ಬಜೆಟ್ ಮಾಡುತ್ತಿರುವುದು ವಿಶೇಷ ಎಂದು ಸಚಿವರು ಬಣ್ಣಿಸಿದರು.
ಎಲ್ಲವೂ ಹೈಕಮಾಂಡ್ ತೀರ್ಮಾನ
ಸದ್ಯದಲ್ಲೇ ಸಂಪುಟ ಪುನರ್ ರಚನೆ ಆಗಲಿದೆ. ಇದು ಕೆಲ ಸಚಿವರಿಗೆ ಕೊನೆಯ ಬಜೆಟ್ ಎಂದೆಲ್ಲ ಹೇಳುತ್ತಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಸಚಿವರು, ಈ ಒಳ್ಳೆಯ ಸಂದರ್ಭದಲ್ಲಿ ಏನನ್ನೂ ಮಾತನಾಡಲು ಹೋಗುವುದಿಲ್ಲ. ಏಕೆಂದರೆ, ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಒಂದು ಶಿಸ್ತು ಇದೆ. ಏನೇ ಚರ್ಚೆ, ತೀರ್ಮಾನಗಳಿದ್ದರೂ ಅದನ್ನು ಹೈಕಮಾಂಡ್ ಮಾಡುತ್ತದೆ ಎಂದು ಹೇಳಿದರು.