ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೂ (Election) ಮುನ್ನ 200 ಯೂನಿಟ್ ಉಚಿತ ಉಚಿತ (200 Units Of Free Power) ಎಂದು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಹೇಳಿಕೊಂಡು ಓಡಾಡಿದ್ದ ಕಾಂಗ್ರೆಸ್ (Congress) ಇದೀಗ ಮಾತು ತಪ್ಪಿದಂತೆ ಕಂಡುಬರುತ್ತಿದೆ. ಇಂದು 5 ಗ್ಯಾರಂಟಿಗಳ ಜಾರಿ ಬಗ್ಗೆ ಘೋಷಣೆ ಮಾಡಿದ್ದರೂ, ರಾಜ್ಯದ ಜನತೆಗೆ ಕರೆಂಟ್ ಶಾಕ್ ಕೊಟ್ಟಿದೆ.
200 ಯೂನಿಟ್ ವಿದ್ಯುತ್ (Gruha Jyothi) ಘೋಷಣೆ ಮಾಡಿದ್ದರೂ, ಕೆಲವೊಂದು ಷರತ್ತುಗಳನ್ನು ಹಾಕಿದೆ. ವಾರ್ಷಿಕ ಸರಾಸರಿ ಬಳಕೆ ಆಧಾರದಡಿ 200 ಯೂನಿಟ್ ಗ್ಯಾರಂಟಿ ಸ್ಕೀಂ ಜಾರಿಗೆ ತಂದಿದೆ. ವಾರ್ಷಿಕ ಸರಾಸರಿ ಜೊತೆಗೆ 10 ಪರ್ಸೆಂಟ್‍ಗಿಂತ ಹೆಚ್ಚು ಯೂನಿಟ್ ವಿದ್ಯುತ್ ಬಳಸಿದ್ರೆ ಮಾಮೂಲಿಯಂತೆ ಎಲ್ಲ ಚಾರ್ಜ್‍ಗಳನ್ನೊಳಗೊಂಡ ವಿದ್ಯುತ್ ಬಿಲ್ ಕಟ್ಟಬೇಕಿದೆ. ಇದು ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಎಲ್ಲಾ ಆರ್‌ಆರ್ ನಂಬರ್‌ಗಳಿಗೆ ಉಚಿತ ಎಂದು ಡಿಸಿಎಂ ಶಿವಕುಮಾರ್ (DK Shivakumar) ಹೇಳಿದ್ದಾರೆ. ಆದ್ರೆ ಒಂದಕ್ಕಿಂತ ಹೆಚ್ಚು ಮನೆಗಳನ್ನ ಬಾಡಿಗೆ ಕೊಟ್ಟ ಮಾಲೀಕರ ವಿಚಾರದಲ್ಲಿ ಸರ್ಕಾರ ಏನು ಮಾಡಲಿದೆ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಇದನ್ನು ವಾಣಿಜ್ಯ ಎಂದು ಪರಿಗಣಿಸುತ್ತಾ? ಅಥವಾ ಒಬ್ಬ ಮಾಲೀಕ ಎಷ್ಟೇ ಮನೆಗಳನ್ನ ಬಾಡಿಗೆಗೆ ಕೊಟ್ಟಿದ್ದರೂ ಆ ಎಲ್ಲ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಸಿಗುತ್ತಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಇದನ್ನೂ ಓದಿ: 5 ಗ್ಯಾರಂಟಿ ಘೋಷಣೆ – ಯಾವ ಯೋಜನೆಗೆ ಎಷ್ಟು ಹಣ ಬೇಕು?
ಗೃಹಜ್ಯೋತಿ ಯೋಜನೆ ಹೇಗೆ?
200 ಯೂನಿಟ್‍ವರೆಗೆ ಉಚಿತ ವಿದ್ಯುತ್ ಎಲ್ಲಾ ಕುಟುಂಬಗಳಿಗೂ ಇದು ಅನ್ವಯವಾಗುತ್ತದೆ. ದುರ್ಬಳಕೆ ತಡೆಯಲು ಒಂದು ವರ್ಷದ ಸರಾಸರಿ ಬಳಕೆ ಲೆಕ್ಕ ಹಾಕಲಾಗುತ್ತದೆ. ಸರಾಸರಿ ವಿದ್ಯುತ್ ಬಳಕೆಯ ಶೇ.10ರಷ್ಟು ಹೆಚ್ಚು ಬಳಸಲು ಅವಕಾಶವಿದೆ. ಜುಲೈ ತಿಂಗಳಿನಿಂದ ಈ ಯೋಜನೆ ಜಾರಿಯಾಗಲಿದ್ದು, ಆಗಸ್ಟ್ ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ. ಎಪಿಎಲ್, ಬಿಪಿಎಲ್ ಎಂಬ ಬೇಧಭಾವ ಇಲ್ಲ. ಆದರೆ ಗೃಹ ಬಳಕೆಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.
ಹೆಚ್ಚು ವಿದ್ಯುತ್ ಬಳಸಿದ್ರೆ ಶಾಕ್?
12 ತಿಂಗಳ ವಿದ್ಯುತ್ ಬಿಲ್‍ನ ಸರಾಸರಿ ಪರಿಗಣಿಸಿ ಹೆಚ್ಚುವರಿಯಾಗಿ 10% ರಷ್ಟು ಬಳಸಲು ಅವಕಾಶವಿದೆ. ಉದಾಹರಣೆಗೆ ಸರಾಸರಿ 100 ಯೂನಿಟ್ ಬಳಸಿದ್ದಲ್ಲಿ ಅಂದಾಜು 110 ಯೂನಿಟ್‍ವರೆಗೆ ಬಳಸಬಹುದು. 110 ಯೂನಿಟ್‍ಗಿಂತ ಜಾಸ್ತಿ ಬಳಸಿದ್ರೆ ಬಿಲ್ ಕಟ್ಟಬೇಕಾಗುತ್ತದೆ. ಒಂದು ಬಿಲ್ಡಿಂಗ್‍ನ ಎಲ್ಲರಿಗೂ ಈ ಯೋಜನೆ ಅನ್ವಯವಾಗುತ್ತಾ? ಬರೀ ಮಾಲೀಕರನ್ನು ಮಾತ್ರ ಪರಿಗಣಿಸುತ್ತಾರಾ? ಬಾಡಿಗೆದಾರರಿಗೂ ಇದು ಅನ್ವಯವಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.