ಉಡುಪಿ: ವಾಟ್ಸಾಪ್ ಓದುಗರು ಗ್ರೂಪ್ ಪೌರ ಕಾರ್ಮಿಕರ ಜೀವನ ಕಥೆಯುಳ್ಳ, ಬಿ.ಎಂ.ಗಿರಿರಾಜ್ ನಿರ್ದೇಶನದ “ಅಮರಾವತಿ” ಕನ್ನಡ ಚಲನಚಿತ್ರ ಪ್ರದರ್ಶನ ಫೆಬ್ರವರಿ 23 ಗುರುವಾರದಂದು ಉಡುಪಿಯ ಡಯಾನಾ ಥಿಯೇಟರಿನಲ್ಲಿ ಆಯೋಜಿಸಿದೆ.
ಸಂಜೆ 4.30 ಹಾಗೂ 7.30 ಕ್ಕೆ ಎರಡು ಶೋಗಳು ಗುರುವಾರದಂದು ಪ್ರದರ್ಶನಗೊಳ್ಳಲಿವೆ. ಸಂಜೆ ಮತ್ತು ರಾತ್ರಿಯ ಎರಡು ಶೋಗಳಿಗಾಗಿ ಥಿಯೇಟರನ್ನು ಬುಕ್ ಮಾಡಿದ್ದು, ಟಿಕೆಟ್ ದರವನ್ನು 60 ರೂ. ಹಾಗೂ 50 ರೂ. ಯಂತೆ ನಿಗದಿ ಮಾಡಲಾಗಿದೆ.
Advertisement
Advertisement
ಸಾಮಾಜಿಕ ಕಳಕಳಿಯ ಸಂದೇಶವಿರುವ ಅಮರಾವತಿ ಚಿತ್ರ ಪ್ರದರ್ಶನಕ್ಕೆ ಉಡುಪಿಯ ಡಯಾನಾ ಥಿಯೇಟರ್ ಕಡಿಮೆ ದರದಲ್ಲಿ ಅವಕಾಶ ನೀಡಿದೆ. ಎರಡು ಪ್ರದರ್ಶನಗಳ ನಂತರ ನಿರ್ದೇಶಕರು ಹಾಗೂ ನಟರನ್ನೊಳಗೊಂಡ ಅಮರಾವತಿ ಚಿತ್ರತಂಡ ಪ್ರದರ್ಶನದ ದಿನ ಆಗಮಿಸಲಿದೆ. ಚಿತ್ರದ ನಂತರ ಅವರೊಂದಿಗೆ ಸಂವಾದವಿದೆ ಎಂದು ಓದುಗರು ವಾಟ್ಸಾಪ್ ಗ್ರೂಪ್ ಮುಖ್ಯಸ್ಥ ಮಂಜುನಾಥ್ ಹೇಳಿದ್ದಾರೆ.
Advertisement
ಪೌರ ಕಾರ್ಮಿಕರಿಗೆ ಉಚಿತ, ವಿಶೇಷ ಆಹ್ವಾನ: ಉಡುಪಿ ನಗರಸಭೆಯ ಎಲ್ಲಾ ಪೌರಕಾರ್ಮಿಕರಿಗೆ ಉಚಿತ ಹಾಗೂ ವಿಶೇಷ ಆಹ್ವಾನ ನೀಡಲಾಗಿದೆ. ಸಂವಾದದಲ್ಲಿ ಪೌರಕಾರ್ಮಿಕರೂ ಭಾಗವಹಿಸಲಿದ್ದು ತಮ್ಮ ಜೀವನ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ.
Advertisement
ಉಡುಪಿ ಮೂಲದ ಓದುಗರು ಬಳಗ ವರ್ಷದ ಹಿಂದೆ ಮೊದಲ ಪ್ರಯತ್ನವಾಗಿ ಮಂಗಳಮುಖಿಯರ ಜೀವನ ಕಥೆ ಆಧರಿಸಿದ, ಲಿಂಗದೇವರು ನಿರ್ದೇಶನದ `ನಾನು ಅವನಲ್ಲ ಅವಳು’ ಸಿನಿಮಾ ಪ್ರದರ್ಶನ ಮಾಡಿಸಲಾಗಿತ್ತು. ಎರಡು ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿದ್ದವು. ಕಲೆಕ್ಷನ್ ಆದ ಹಣದಲ್ಲಿ ಉಡುಪಿಯ ಮಂಗಳ ಮುಖಿಯರು ಶಿಕ್ಷಣ, ಉದ್ಯೋಗ ಹೀಗೆ ಸಮಾಜದ ಮುಖ್ಯವಾಹಿನಿಗೆ ಬರಲು ಬೇಕಾದ ಸಹಾಯವನ್ನು ಮಾಡಿತ್ತು.
ಈ ಬಾರಿ ಅಮರಾವತಿ ಚಿತ್ರದಂತಹ ಸದಭಿರುಚಿಯ ಸಿನಿಮಾಗಳಿಗೆ ಜನ ಬರುವುದಿಲ್ಲ, ಥಿಯೇಟರ್ ಸಿಗುವುದಿಲ್ಲ ಎಂಬುದನ್ನು ಸುಳ್ಳು ಮಾಡಬೇಕು. ಪೌರ ಕಾರ್ಮಿಕರ ಸಮಸ್ಯೆ ಏನೆಂಬುದನ್ನು ಎಲ್ಲರೂ ಅರಿಯಬೇಕು. ಅವರ ಜೀವನ ಹೇಗಿದೆ ಎಂದು ತಿಳಿಯಲು ಆಯೋಜಕರು ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ.