ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಸೈನಿಕ ಶಾಲೆಯ ಸಮೀಪದ ಹಾರಂಗಿ ನದಿ ದಂಡೆಯ ಬಳಿ 4 ಕಾಡಾನೆಗಳು ಕಂಡು ಬಂದಿದ್ದು, ಈ ಭಾಗದ ಗ್ರಾಮಸ್ಥರು ಭಯಭೀತರಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ 3 ಕಾಡಾನೆಗಳು ಹಾರಂಗಿ ನದಿಯನ್ನು ದಾಟಿ ಬೆಂಡೆಬೆಟ್ಟದ ಕಡೆಗೆ ಹೋದವು. ಆದರೆ ಒಂದು ಅನೆ ಮಾತ್ರ ನದಿಯನ್ನು ದಾಟದೆ ನದಿಯ ದಂಡೆಯಲ್ಲಿ ಮಲ್ಲೇನಹಳ್ಳಿಯವರೆಗೆ ತೆರಳಿತು. ಅದನ್ನು ಹಿಂಬಾಲಿಸಿ ಅರಣ್ಯ ಇಲಾಖೆ ಪಟಾಕಿ ಸಿಡಿಸಿ ಮಲ್ಲೇನಹಳ್ಳಿ ಹತ್ತಿರ ಹಾರಂಗಿ ನದಿಯನ್ನು ದಾಟಿಸಿ ಬೆಂಡೆಬೆಟ್ಟದ ಕಾಡಿನ ಕಡೆಗೆ ಆನೆಯನ್ನು ಓಡಿಸಿದರು.
ಈ ಕಾರ್ಯಾಚರಣೆಯಲ್ಲಿ ಹುದುಗೂರು ಉಪ ವಲಯ ಅರಣ್ಯ ಅಧಿಕಾರಿ ಸತೀಶ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಪ್ರತಿ ನಿತ್ಯ ಕಾಡಾನೆ ಹಾವಳಿ ಈ ಭಾಗದಲ್ಲಿ ಹೆಚ್ಚುತ್ತಿದ್ದು ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿದೆ. ಅರಣ್ಯ ಇಲಾಖೆಯವರು ಮಾತ್ರ ಕಾಡಾನೆಗಳು ಬರುವಾಗ ಬಂದು ಓಡಿಸಿ ಹಣದ ಬಿಲ್ ಮಾಡಿಕೊಳ್ಳುತ್ತಾರೆ. ಆದರೆ ನಷ್ಟ ಅಗಿರುವುದನ್ನು ಯಾರು ಕೊಡುವುದಿಲ್ಲ ಎಂದು ಇಲಾಖೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.