– ಗೌರಿಬಿದನೂರಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿಗೆ ಭೂಮಿಪೂಜೆ
– ಕುಡಿಯುವ ನೀರು, ಒಳಚರಂಡಿ ಕಾಮಗಾರಿಗಳಿಗೆ 14,000 ಕೋಚಿ ಖರ್ಚು
ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮ ಪಾಲುದಾರಿಕೆಯಲ್ಲಿ ರಾಜ್ಯದಲ್ಲಿ ಒಂದೂವರೆ ವರ್ಷದಲ್ಲಿ 14,000 ಕೋಟಿ ರೂಪಾಯಿಗಳನ್ನ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಖಾತೆ ಸಚಿವ ಬೈರತಿ ಸುರೇಶ್ (Byrathi Suresh) ತಿಳಿಸಿದರು.
ಶನಿವಾರ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರಿನ ಗೊಟಕನಾಪುರದಲ್ಲಿ ಅಮೃತ್-2 ಯೋಜನೆಯಡಿ ವಾಟದಹೊಸಹಳ್ಳಿ ಕೆರೆಯಿಂದ ಗೌರಿಬಿದನೂರು ನಗರಕ್ಕೆ ಕುಡಿಯುವ ನೀರು ಪೂರೈಸುವ 66 ಕೋಟಿ ಮೊತ್ತದ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಕುಡಿಯುವ ನೀರು (Drinking Water) ಮತ್ತು ಒಳಚರಂಡಿ ಕಾಮಗಾರಿಗಳಿಗೆ 14,000 ಕೋಟಿಖರ್ಚು ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗೂಂಡಾಗಳನ್ನ ಸಾಕ್ಬೇಡಿ, ಮನೆಯಲ್ಲಿ ನಾಯಿ ಸಾಕಿ, ಒಳ್ಳೆಯವರ ಸಹವಾಸ ಮಾಡಿ – ದರ್ಶನ್‌ಗೆ ಪ್ರಥಮ್ ಸ್ಟ್ರೈಟ್ ಹಿಟ್
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಮೃತ್ 2 ಯೋಜನೆಯಡಿ 313 ಕೋಟಿ ರೂಪಾಯಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ, ಗುಡಿಬಂಡೆ, ಗೌರಿಬಿದನೂರು, ಬಾಗೇಪಲ್ಲಿ ಪಟ್ಟಣಗಳ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅಮೃತ್ 2 ಯೋಜನೆ ಸಹಕಾರಿಯಾಗಲಿದೆ. ರಾಜ್ಯ ಸರ್ಕಾರಕ್ಕೆ ಕುಡಿಯುವ ನೀರು ಬವಣೆಯ ಬಗ್ಗೆ ಅರಿವಿದೆ. ಕುಡಿಯುವ ನೀರಿನ ಕಾಮಗಾರಿಗಳನ್ನ ಮೊದಲ ಆದ್ಯತೆಯನ್ನಾಗಿ ರಾಜ್ಯ ಸರ್ಕಾರ ಪರಿಗಣಿಸಿದೆ. ವಾಟದಹೊಸಹಳ್ಳಿ ಕೆರೆಯಿಂದ ನೀರನ್ನು ಗೌರಿಬಿದನೂರು ನಗರಕ್ಕೆ ಕುಡಿಯುವ ಉದ್ದೇಶದಿಂದ ತೆಗೆದುಕೊಂಡು ಹೋಗಲಾಗುತ್ತಿದ್ದು, ಇದರಿಂದ ಗೌರಿಬಿದನೂರು ನಗರಕ್ಕೆ ಮಾತ್ರವಲ್ಲದೆ ಮಾರ್ಗಮಧ್ಯದ 08 ಗ್ರಾಮಗಳಿಗೂ ಕುಡಿಯುವ ನೀರನ್ನು ಪೂರೈಸಲಾಗುತ್ತದೆ ಎಂದು ವಿವರಿಸಿದರು.
ವಾಟದಹೊಸಹಳ್ಳಿ ಕೆರೆಯ ಶೇ.40 ರಷ್ಟು ನೀರನ್ನು ಮಾತ್ರ ಉದ್ಧೇಶಿತ ಯೋಜನೆಗೆ ಬಳಸಿಕೊಳ್ಳಲಾಗುವುದು. ಉಳಿದ ಶೇ.60 ರಷ್ಟು ನೀರು ಈ ಮೊದಲಿನಂತೆ ನೆರೆಹೊರೆಯ ಗ್ರಾಮಗಳ ಕೃಷಿ ಮತ್ತಿತರ ಉದ್ಧೇಶಗಳಿಗೆ ಬಳಕೆಯಾಗಲಿದೆ. ಗೌರಿಬಿದನೂರು ನಗರಕ್ಕೆ ನೀರು ತೆಗೆದುಕೊಂಡು ಹೋದರೆ ಕೆರೆಯ ನೀರು ಖಾಲಿಯಾಗುತ್ತದೆ, ತೊಂದರೆಯಾಗುತ್ತದೆ ಎಂಬುದು ತಪ್ಪು ಕಲ್ಪನೆ. ಈ ತಪ್ಪು ಕಲ್ಪನೆಯಿಂದ ಈ ಭಾಗದ ಜನತೆ ಹೊರಬಂದು ಈ ವಿಷಯವನ್ನು ಕುಡಿಯುವ ನೀರಿನ ಸಮಸ್ಯೆ ಮತ್ತು ಆದ್ಯತೆಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಉದ್ದೇಶಿತ ಯೋಜನೆಯಿಂದ 83,000 ಜನರ ಕುಡಿಯುವ ನೀರಿಗೆ ಸಹಾಯವಾಗಲಿದೆ. ಇದನ್ನೂ ಓದಿ: 162 ಬಾರಿ ಫಾರಿನ್ ಟ್ರಿಪ್, 300 ಕೋಟಿ ಹಗರಣ – ನಕಲಿ ರಾಯಭಾರ ಕಚೇರಿ ರಹಸ್ಯ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು
ಇದೇ ವಾಟದಹೊಸಹಳ್ಳಿ ಕೆರೆಗೆ ಎತ್ತಿನಹೊಳೆ ಯೋಜನೆಯ ನೀರನ್ನೂ ಹರಿಸಲಾಗುವುದು. ಹೀಗಾಗಿ ಕೆರೆಯಲ್ಲಿ ನೀರಿಗೆ ಯಾವುದೇ ಸಮಸ್ಯೆ ಮತ್ತು ಕೊರತೆ ಆಗುವುದಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಕುಡಿಯುವ ನೀರಿನ ಯೋಜನೆಗೆ ಯಾರೂ ತಕರಾರು ತೆಗೆಯಬಾರದು ಮತ್ತು ಅಡ್ಡಿಪಡಿಸಬಾರದು. ರೈತರನ್ನು ಕಷ್ಟಕ್ಕೆ ದೂಡಿ ನೀರನ್ನು ತೆಗೆದುಕೊಂಡು ಹೋಗುವುದಿಲ್ಲ. ಕುಡಿಯುವ ನೀರಿನ ವಿಷಯದಲ್ಲಿ ರಾಜಕಾರಣ ಬೇಡ. ಎತ್ತಿನಹೊಳೆ ಯೋಜನೆಯ ನೀರಿನ ಸಂಪರ್ಕ ವಾಟದಹೊಸಹಳ್ಳಿ ದೊರೆಯುವುದು ಖಚಿತ. ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎತ್ತಿನಹೊಳೆ ಯೋಜನೆಗೆ ಹೆಚ್ಚುವರಿಯಾಗಿ 3,000 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ರೈತರ ಪರವಾಗಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮಾತನಾಡಿ, ಇತ್ತೀಚಿಗೆ ನಗರೀಕರಣ ಹೆಚ್ಚಾಗುತ್ತಿದ್ದು, ನಗರಗಳು ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಮೂಲಭೂತ ಸೌಕರ್ಯದಡಿ ಕುಡಿಯುವ ನೀರನ್ನು ಆದ್ಯತೆಯ ಮೇಲೆ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗಾರಿಕೆ. ಎತ್ತಿನಹೊಳೆ ಯೋಜನೆ ನೀರು ಇನ್ನು ಎರಡು ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ದೊರೆಯಲಿದೆ. ಯೋಜನೆಗೆ ಅಗತ್ಯವಿರುವ 3000 ಕೋಟಿ ರೂಪಾಯಿಗಳನ್ನೂ ನೀಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನ ಹೊಳೆ ನೀರು ನೀಡಿದ ನಂತರ ಉಳಿದ ಯೋಜನೆಗಳು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದು, ಎತ್ತಿನಹೊಳೆ ಕಾಮಗಾರಿಯನ್ನು ತ್ವರಿತವಾಗಿ ಪೂರೈಸಲು ಒತ್ತು ನೀಡಲಾಗುತ್ತಿದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ರಸಗೊಬ್ಬರ ಕೊರತೆಗೆ ಕಳ್ಳದಂಧೆ ಕಾರಣ – ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಕೇಂದ್ರ ಸರ್ಕಾರದ ಅಮೃತ್ ಯೋಜನೆ ನಗರ ಪ್ರದೇಶಗಳ ನೀರಿನ ವಿಚಾರದಲ್ಲಿ ವರದಾನವಾಗಿದೆ. ವಾಟದಹೊಸಹಳ್ಳಿ ಕೆರೆಯ ಕುಡಿಯುವ ನೀರಿನ ಯೋಜನೆ ಆಡಳಿತಾತ್ಮಕ ಅನುಮೋದನೆ ಸೇರಿ ಎಲ್ಲಾ ಅನುಮೋದನೆಗಳೂ ಆಗಿರುವುದರಿಂದ ಶಂಕುಸ್ಥಾಪನೆಯಾದ ಮೇಲೆ ಕಾಮಗಾರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಈ ಕೆರೆಗೆ ಎತ್ತಿನಹೊಳೆ ನೀರನ್ನು ಹರಿಸುವವರೆಗೂ ಗೌರಿಬಿದನೂರು ನಗರಕ್ಕೆ ಒಂದು ಹನಿ ನೀರು ತೆಗೆಯುವುದಿಲ್ಲ ಎಂದು ಸ್ಥಳೀಯ ಶಾಸಕರು ಸ್ಪಷ್ಟವಾಗಿ ಹೇಳಿರುವುದು ಸ್ವಾಗತಾರ್ಹ. ಈ ಭಾಗದ ಜನತೆ ಅವರ ಮೇಲೆ ನಂಬಿಕೆ ಇಟ್ಟು ಕುಡಿಯುವ ನೀರಿನ ಯೋಜನೆಗೆ ಸಹಕರಿಸಬೇಕು ಅಂತ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಹೆಚ್ ಪುಟ್ಟಸ್ವಾಮಿಗೌಡ, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಓ ಡಾ.ವೈ ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ನಗರಸಭಾ ಉಪಾಧ್ಯಕ್ಷ ಲಕ್ಷೀನಾರಾಯಣ, ಪೌರಾಯುಕ್ತ ಕೆ.ಜಿ ರಮೇಶ್, ಮುಖ್ಯ ಅಭಿಯಂತರ ಪ್ರವೀಣ್ ಲಿಂಗಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್ ಲತಾ, ನಗರಸಭಾ ಸದ್ಯಸರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.