DistrictsKarnatakaLatestTumakuru

ನಾವೇ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡ್ತೇವೆ: ಸಿಎಂ ಎಚ್‍ಡಿಕೆ

ತುಮಕೂರು: ಕೇಂದ್ರದಲ್ಲಿ ಕಾಂಗ್ರೆಸ್ – ಜೆಡಿಎಸ್ ಸೇರಿದಂತೆ ಮಹಾಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ನಡೆದಾಡುವ ದೇವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳು ಸಲ್ಲಿಸಿರುವ ಸೇವೆಯ ಬಗ್ಗೆ ಹೇಳಲು ಪದಗಳು ಇಲ್ಲ. ನಾನು ರಾಜ್ಯದ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ವೇಳೆ ಅವರು ನನ್ನನ್ನು ಕೇಳಿದ್ದು ಒಂದೇ, “ರೈತರು ಹೇಗಿದ್ದಾರೆ. ರಾಜ್ಯದಲ್ಲಿ ಮಳೆ-ಬೆಳೆ ಚೆನ್ನಾಗಿ ಅಗುತ್ತೀದ್ದೇಯಾ” ಎಂದು ಮಾತ್ರ. ಅದನ್ನು ಬಿಟ್ಟರೆ ಅವರು ಬೇರೆ ಏನು ಕೇಳಲಿಲ್ಲ. ಪ್ರತಿದಿನ ಅವರಿಗೆ ನಮನ ಸಲ್ಲಿಸಿ ಮುಂದಿನ ಕಾರ್ಯಕ್ರಮ ಕ್ಕೆ ಹೋಗುತ್ತೇನೆ ಎಂದರು.

ಇದೇ ವೇಳೆ ಅವರಿಗೆ ಭಾರತ ರತ್ನ ಲಭಿಸಿದ್ದರೆ, ಒಂದು ತೂಕ ಬರುತ್ತಿತ್ತು. ಮುಂದಿನ ದಿನಗಳಲ್ಲಿ ನಮಗೆ ಆ ಶಕ್ತಿ ಬಂದರೆ ನಾನು ಆ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಈ ರಾಜ್ಯಕ್ಕೆ ಬೇಕಾದ್ದು ಮಾಡುವ ಶಕ್ತಿ ನಮಗೆ ಬರುತ್ತದೆ. ಇದರಲ್ಲಿ ಯಾವುದೇ ಸಂಶಯಬೇಡ. ಪರಮಪೂಜ್ಯ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡುವ ಅವಕಾಶ ನಮಗೆ ಬರುತ್ತೆ. ಜನ ಇದನ್ನು ಅರ್ಥ ಮಾಡಿಕೊಳ್ಳಕೊಂಡು ನಮಗೆ ಶಕ್ತಿ ತುಂಬಬೇಕು. ನನ್ನ ಪುಣ್ಯ 2006ರಲ್ಲೇ ಶ್ರೀಗಳಿಗೆ ಕರ್ನಾಟಕ ರತ್ನ ನೀಡಿದ್ದೇವು ಎಂದು ಹೇಳಿದರು.

ಮಾದರಿ ಗ್ರಾಮ: ಸಿದ್ದಗಂಗಾ ಶ್ರೀಗಳ ಹುಟ್ಟೂರನ್ನು ಸರ್ಕಾರ ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಮಾಡುತ್ತದೆ. ಅಲ್ಲದೇ ಅವರ ಹೆಸರಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುತ್ತೇವೆ ಎಂದು ಸಿಎಂ ಘೋಷಣೆ ಮಾಡಿದರು. ಡಿಸಿಎಂ ಪರಮೇಶ್ವರ್ ಅವರು ಮಾತನಾಡಿ, ಶ್ರೀಗಳು ಇಡೀ ಜೀವನವನ್ನು ಧರ್ಮಕ್ಕಾಗಿ ಜೀವನ ಮುಡಿಪಾಗಿಟ್ಟಿದ್ದಾರೆ. ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಶ್ರೀಗಳ ಹೆಸರಿನಲ್ಲಿ ಕಾರ್ಯಕ್ರಮ ಜಾರಿಗೆ ತರಲು ಸಿಎಂ ಅವರ ಬಳಿ ಮನವಿ ಮಾಡುತ್ತೇನೆ ಎಂದು ಎಂದರು.

ವಿರೋಧಿ ಪಕ್ಷದ ನಾಯಕರಾದ ಯಡಿಯೂರಪ್ಪ ಅವರು ಮಾತನಾಡಿ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳು ಈ ಜಗತ್ತಿನ ಅಚ್ಚರಿ ಅಂದರೆ ತಪ್ಪಾಗಲಾರದು. ಜಾತಿ, ಮತಗಳ ಭೇದವಿಲ್ಲದೆ ಜೀವನ ನಡೆಸಿದ ಸ್ವಾಮೀಜಿಗಳು ಎಲ್ಲಾ ಧರ್ಮದವರಿಗೂ ಶಿಕ್ಷಣ ನೀಡಿದ್ದಾರೆ. ರಾಷ್ಟ್ರೀಯ ಭಾವೈಕ್ಯತೆಯನ್ನ ನಾವು ಎಲ್ಲಿಯೂ ಹುಡುಕಿಕೊಂಡು ಹೋಗುವ ಅಗತ್ಯವೇ ಇಲ್ಲದಂತೆ, ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರೆ ಸಾಕು ಆದರ ಅರಿವು ನಮಗಾಗುತ್ತದೆ ಎಂದು ತಿಳಿಸಿದರು.

ಗೃಹ ಸಚಿವ ಎಂ.ಬಿ. ಪಾಟೀಲರು ಮಾತನಾಡಿ, ನೊಬೆಲ್ ಪುರಸ್ಕಾರಕ್ಕೆ ಶಿಫಾರಸು ಮಾಡುವ ಅವಕಾಶ ಇದೆಯಾ, ಅದರ ಮಾನದಂಡಗಳೇನಿದೆ ಎಂಬುವುದನ್ನು ಸಂಗ್ರಹಿಸುತ್ತಿರುವುದಾಗಿ ಹೇಳಿದರು. ಇದೇ ವೇಳೆ ಸಿದ್ದಗಂಗಾ ಶ್ರೀಗಳಿಗೆ ಚಿಕೆತ್ಸೆ ನೀಡಿದ ವೈದ್ಯರಾದ ಡಾ.ವೆಂಕಟರಮಣ ಮತ್ತು ಡಾ.ರವೀಂದ್ರ ಅವರಿಗೆ ಸಿದ್ದಗಂಗಾ ಮಠದಿಂದ ಸನ್ಮಾನ ಮಾಡಲಾಯಿತು.

ಉಳಿದಂತೆ ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಬೆಳಗ್ಗೆಯಿಂದಲೇ ಅರ್ಚಕರು, ಸಿದ್ದಲಿಂಗ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಗಣ್ಯಾತಿಗಣ್ಯರು ಸೇರಿದಂತೆ ಲಕ್ಷಾಂತರ ಭಕ್ತರು 2 ಕಿ.ಮೀ. ಸರತಿ ಸಾಲಿನಲ್ಲಿ ನಿಂತು ಶ್ರೀಗಳಿಗೆ ನಮನ ಸಲ್ಲಿಸಿದರು. ಶ್ರೀಗಳ ಭಾವಚಿತ್ರ ಇರುವ ಟೀ ಶರ್ಟ್ ಧರಿಸಿದ 13 ಸಾವಿರಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯವಸ್ಥೆಗಳನ್ನ ನೋಡಿಕೊಂಡರು.

ದಾಸೋಹ ಕಾರ್ಯಕ್ರಮ: ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರ ಆಗಮಿಸಿ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಪುಣ್ಯಾರಾಧನೆ ಕಾರ್ಯಕ್ರಮದ ಭಾಗವಾಗಿ ಆಗಮಿಸಿದ್ದ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅನ್ನ, ಸಾಂಬಾರ್, ಪಾಯಸ, ಬೂಂದಿ, ಜಿಲೇಬಿ ಸೇರಿದಂತೆ ಇನ್ನಿತರ ತಿನಿಸುಗಳನ್ನು ಮಠದ 11 ಕಡೆ ದಾಸೋಹ ವ್ಯವಸ್ಥೆಯನ್ನ ಮಾಡಲಾಗಿತ್ತು. ಸಂಜೆ ವೇಳೆಗೆ ಭಕ್ತರ ಸಂಖ್ಯೆ ಹೆಚ್ಚಳವಾದ ಕಾರಣ ಶ್ರೀಗಳ ಗದ್ದುಗೆ ಒಳ ಪ್ರವೇಶಕ್ಕೆ ಅವಕಾಶ ನೀಡದೇ ಮುಖ್ಯದ್ವಾರದಿಂದಲೇ ದರ್ಶನ ಮಾಡಲು ಅವಕಾಶ ನೀಡಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Leave a Reply

Your email address will not be published. Required fields are marked *

Back to top button