ಮಡಿಕೇರಿ: ಕಳೆದ ಎರಡು ವರ್ಷಗಳಿಂದ ಮಹಾಮಳೆಗೆ ಕೊಡಗಿನ ಕಾವೇರಿ ನದಿ ತೀರದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನದಿ ತಟದ ಬಡಾವಣೆಗಳಲ್ಲಿ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಕಾವೇರಿ ನದಿಯಲ್ಲಿ ಹೂಳೆತ್ತುವ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಚಾಲನೆ ನೀಡಿದರು.
ಕೊಪ್ಪದ ಕಾವೇರಿ ಸೇತುವೆ ಕೆಳ ಭಾಗದಲ್ಲಿ ಗಣಪತಿ ಪೂಜೆ ಸಲ್ಲಿಸಿದ ಬಳಿಕ ಜೆಸಿಬಿಯಲ್ಲಿ ಕುಳಿತ ಶಾಸಕ ರಂಜನ್ ಹೂಳೆತ್ತುವ ಕೆಲಸಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ ಮಾತಾನಾಡಿದ ಅವರು, 85 ಲಕ್ಷ ರೂ. ವೆಚ್ಚದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ದಂಡೆಯ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸಣ್ಣ ಮಟ್ಟದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ನದಿ ಹೂಳೆತ್ತಲು ಅವಕಾಶ ನೀಡಲಾಗಿದೆ. ಕಾವೇರಿ ನೀರಾವರಿ ನಿಗಮದ ವತಿಯಿಂದಲೂ ಸಂಬಂಧಿಸಿದಂತೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಕೆಲಸಕ್ಕೆ ಕಳೆದ ಸಿಎಂ ಕುಮಾರಸ್ವಾಮಿ ಅವಧಿಯಲ್ಲೇ 75 ಕೋಟಿ ಮೀಸಲಿಡಲಾಗಿತ್ತು. ಅಂದಾಜು ಪಟ್ಟಿ ತಯಾರಿಸಿದಾಗ 130 ಕೋಟಿಯಷ್ಟು ಅಗತ್ಯವಿತ್ತು ಎಂದರು.
Advertisement
Advertisement
ಕೇವಲ ಕುಶಾಲನಗರ ಮಾತ್ರವಷ್ಟೇ ಅಲ್ಲ, ಹಟ್ಟಿ ಹೊಳೆ, ಮುಕ್ಕೋಡ್ಲು, ಮಾದಾಪುರ, ಹಮ್ಮಿಯಾಲ ಭಾಗದಲ್ಲಿ ಹೊಳೆಯಲ್ಲಿ ಹೂಳು ತುಂಬಿದೆ. ಪರಿಣಾಮ ಹೊಳೆ ನೀರು ದಿಕ್ಕು ಬದಲಿಸಿ ಹರಿಯುತ್ತಿದೆ. ಕಳೆದ ಎರಡು ವರ್ಷಗಳಿಂದ ಸಂಭವಿಸಿದ ಪ್ರವಾಹದಲ್ಲಿ ಜಿಲ್ಲೆ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಬೇಕಾಯಿತು. ಪ್ರವಾಹದಿಂದ ಕುಶಾಲನಗರ ಮುಳುಗಬೇಕಾದ ಪರಿಸ್ಥಿತಿಯನ್ನು ನೋಡಬೇಕಾಯಿತು. ಪ್ರವಾಹ ತಡೆಗಟ್ಟುವ ಉದ್ದೇಶದ ಸೇವಾ ಭಾವನೆಯಿಂದ ಹೂಳು ತೆಗೆಯುವಂತೆ ಗುತ್ತಿಗೆದಾರರಿಗೆ ಹೇಳಿದ್ದೇನೆ. ಅದರಲ್ಲಿ ಯಾವುದೇ ಲೋಪಗಳು ಆಗದಂತೆ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.