ಗಾಂಧಿನಗರ: ಗುಜರಾತ ರಾಜ್ಯದ ಗಾಂಧಿನಗರದ ಬಳಿ ಪಿಯಾಬ್ ಗ್ರಾಮದಲ್ಲಿ ಮದುವೆ ದಿನ ವರ ಮತ್ತು ಆತನ ಕುಟುಂಬಸ್ಥರನ್ನು ಮೂಸಿ ನೋಡಿದ ನಂತರ ಮಾಂಗಲ್ಯಧಾರಣೆ ಮಾಡಿಸುತ್ತಾರೆ.
ಗಾಂಧಿನಗರ ಜಿಲ್ಲೆಯ ಕಲೋಲ ತಾಲೂಕಿನ ಪಿಯಾಬ್ ಗ್ರಾಮದಲ್ಲಿ ಮದುವೆ ದಿನ ವರ ಮತ್ತು ಆತನ ಕುಟುಂಬಸ್ಥರನ್ನು ಮೂಸಿ ನೋಡಲು 25 ಜನರ ಗುಂಪನ್ನು ನೇಮಕ ಮಾಡಲಾಗಿರುತ್ತದೆ. ಈ ತಂಡ ವರ, ವರನ ತಂದೆ ಮತ್ತು ಆತನ ಗೆಳಯರು, ಕುಟುಂಬಸ್ಥರನ್ನು ಮೂಸಿ ನೋಡಿ ಮದ್ಯಪಾನ ಮಾಡಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಾರೆ. ಒಂದು ವೇಳೆ ವರ ಅಥವಾ ಆತನ ಕುಟುಂಬಸ್ಥರು ಮದ್ಯ ಸೇವಿಸಿದ್ದರೆ ಮದುವೆಯನ್ನು ನಿಲ್ಲಿಸಲಾಗುತ್ತದೆ.
ಮದುವೆ ನಿಂತ್ರೆ ದಂಡ:
ಮದ್ಯಪಾನ ಮಾಡಿದ್ದರಿಂದ ಮದುವೆ ನಿಂತರೆ ವರನ ಕುಟುಂಬಸ್ಥರು ವಧುವಿಗೆ ಒಂದು ಲಕ್ಷ ರೂ.ಯನ್ನು ದಂಡವಾಗಿ ನೀಡಬೇಕು. ಕಳೆದ ನಾಲ್ಕು ವರ್ಷಗಳಿಂದ ಈ ಪದ್ಧತಿಯನ್ನು ಗ್ರಾಮದಲ್ಲಿ ಜಾರಿಗೆ ತರಲಾಗಿದೆ. ಇದಕ್ಕೂ ಮುನ್ನ 20 ವರ್ಷದೊಳಗಿನ 15 ಯುವಕರು ಮದ್ಯಪಾನ ಮಾಡಿದ್ದರಿಂದ ಸಾವನ್ನಪ್ಪಿದ್ದರು. ಪತಿಯ ಕುಡಿತದಿಂದ ಮಹಿಳೆಯರು ಸಾಕಷ್ಟು ನೋವು ಪಡೋದನ್ನ ಗಮನಿಸಿದ್ದೇನೆ. ಹಾಗಾಗಿ ಈ ನಿಯಮವನ್ನ ಜಾರಿಗೆ ತರಲಾಯ್ತು ಎಂದು ಗ್ರಾಮದ ಮುಖ್ಯಸ್ಥ ರಮೇಶಜೀ ಠಾಕೂರ್ ಹೇಳುತ್ತಾರೆ.
ಮದುವೆ ಮುನ್ನ ವರ ಹಾಗೂ ಆತನ ಕುಟುಂಬದ ಬಗ್ಗೆ ತಿಳಿದುಕೊಳ್ಳುತ್ತೇವೆ. ನಂತರವೇ ಗ್ರಾಮದ ಯುವತಿಯೊಂದಿಗೆ ಮದುವೆ ಮಾಡಿಸಲಾಗುತ್ತದೆ. ಇದರಿಂದ ಗ್ರಾಮದ ಯುವತಿಯರು ಸಾಂಸರಿಕ ಜೀವನದಲ್ಲಿ ಸುಖವಾಗಿರುತ್ತಾರೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.