– ಫೆಬ್ರವರಿಯಲ್ಲಿ ನಿಶ್ಚಯವಾಗಿತ್ತು ಮದುವೆ
– ಎರಡು ಕುಟುಂಬದಿಂದ ನಾಪತ್ತೆ ದೂರು ದಾಖಲು
ಗಾಂಧಿನಗರ: ಪ್ರೇಮಿಗಳು ತಮ್ಮ ಮದುವೆ ಸಂಭ್ರಮದ ತಯಾರಿಯಲ್ಲಿ ಬ್ಯುಸಿಯಾಗಿದ್ದರು. ಈ ಮಧ್ಯೆ ವಧುವಿನ ತಾಯಿಯ ಜೊತೆ ವರನ ತಂದೆಗೆ ಪ್ರೇಮಾಂಕುರವಾಗಿ ಪರಾರಿಯಾಗಿ ಯುವ ಪ್ರೇಮಿಗಳ ಮದುವೆ ರದ್ದಾಗಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಇದನ್ನೂ ಓದಿ: ಹನಿಮೂನ್ ಮುಗಿಸಿ ಬಂದ ಮಗ್ಳ ಪತಿಯನ್ನೇ ಮದ್ವೆಯಾದ ತಾಯಿ
48 ವರ್ಷದ ವರನ ತಂದೆ ಗಣೇಶ್ 48 (ಹೆಸರು ಬದಲಾಯಿಸಲಾಗಿದೆ) ಮತ್ತು 46 ವರ್ಷದ ವಧುವಿನ ತಾಯಿ ವೈಜಯಂತಿ (ಹೆಸರು ಬದಲಾಯಿಸಲಾಗಿದೆ) ಇಬ್ಬರು ಪರಾರಿಯಾಗಿದ್ದಾರೆ. ಯುವ ಪ್ರೇಮಿಗಳ ಮದುವೆ ಫೆಬ್ರವರಿ ಎರಡನೇ ವಾರದಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಗಣೇಶ್ ಮತ್ತು ವೈಜಯಂತಿ ನಾಪತ್ತೆಯಾಗಿರುವುದರಿಂದ ಪ್ರೇಮಿಗಳ ಮದುವೆ ಕ್ಯಾನ್ಸಲ್ ಆಗಿದೆ. ಜನವರಿ 10ನೇ ತಾರೀಕಿನಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಹೀಗಾಗಿ ಎರಡು ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.
ಪ್ರೇಮಿಗಳಿಬ್ಬರ ತಮ್ಮ ಪೋಷಕರನ್ನು ಒಪ್ಪಿಸಿ ಮದುವೆಯಾಗಲು ನಿರ್ಧರಿಸಿದ್ದರು. ಅದರಂತೆಯೇ ಎರಡು ಮನೆಯವರು ಒಪ್ಪಿ ಕಳೆದ ವರ್ಷ ನಿಶ್ಚಿತಾರ್ಥ ಕೂಡ ಮಾಡಿದ್ದರು. ಮುಂದಿನ ತಿಂಗಳ ಮದುವೆ ಕೂಡ ಫಿಕ್ಸ್ ಆಗಿತ್ತು. ಹೀಗಾಗಿ ಜೋಡಿಗಳು ತಮ್ಮ ಮದುವೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ ಗಣೇಶ್ ಮತ್ತು ವೈಜಯಂತಿ ನಾಪತ್ತೆಯಾಗಿರುವುದರಿಂದ ಮನೆಯವರು ಶಾಕ್ ಆಗಿದ್ದಾರೆ.
ಗಣೇಶ್ ಮತ್ತು ವೈಜಯಂತಿ ಯುವಕರಾಗಿದ್ದಾಗ ಪ್ರೀತಿಸುತ್ತಿದ್ದರು. ಆದರೆ ಕಾರಣಾಂತರದಿಂದ ಇಬ್ಬರು ಬೇರೆ ಬೇರೆ ಮದುವೆಯಾಗಿದ್ದರು. ಈಗ ಅವರ ಮಕ್ಕಳಿಂದ ಗಣೇಶ್ ಮತ್ತು ವೈಜಯಂತಿ ಮತ್ತೆ ಭೇಟಿಯಾಗಿದ್ದಾರೆ. ಮಕ್ಕಳ ಮದುವೆ ಓಡಾಟದ ಸಮಯದಲ್ಲಿ ಮತ್ತೆ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರಿದೆ. ಈಗ ಮಕ್ಕಳಿಗೆ ಗೊತ್ತಾಗದಂತೆ ಓಡಿ ಹೋಗಿದ್ದಾರೆ ಎಂದು ಶಂಕಿಸಲಾಗಿದೆ.
ಗಣೇಶ್ ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ ಜವಳಿ ಉದ್ಯಮಿಯಾಗಿದ್ದು, ರಾಜಕೀಯ ಪಕ್ಷವೊಂದರ ನಾಯಕನಾಗಿ ಗುರುತಿಸಿಕೊಂಡಿದ್ದರು. ಗಣೇಶ್ ಮತ್ತು ವೈಜಯಂತಿ ಇಬ್ಬರು ಕತಾರ್ಗಂ ಪ್ರದೇಶದಲ್ಲಿ ನೆರೆಹೊರೆಯವರಾಗಿದ್ದರು. ಹೀಗಾಗಿ ಇವರಿಬ್ಬರು ಬಹುಕಾಲದ ಸ್ನೇಹಿತರಾಗಿದ್ದರು. ಕಾಲೇಜಿನಲ್ಲಿ ಪ್ರೇಮಿಗಳಾಗಿದ್ದ ಇವರು ಈಗ ಮಾತನಾಡಿಕೊಂಡು ಓಡಿಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ಗಣೇಶ್ ಮತ್ತು ವೈಜಯಂತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.