ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಮತ್ತು ಲಾರಿ ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಡಿಸೆಂಬರ್ ತಿಂಗಳ ಕೊನೆಯಲ್ಲಿ ಹಸೆಮಣೆ ಏರಬೇಕಾಗಿದ್ದ ವರ ಮೃತಪಟ್ಟಿದ್ದಾರೆ.
ಕೋಟೇಶ್ವರ ದೊಡ್ಡೋಣಿ ರಸ್ತೆಯ ಪೇಟೆಮನೆ ನಿವಾಸಿ ವರುಣ್ (30) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಇವರಿಗೆ ಇದೇ ಡಿಸೆಂಬರ್ 30 ರಂದು ಮದುವೆಯ ದಿನ ನಿಗದಿಯಾಗಿತ್ತು.
ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿರುವ ವರುಣ್ ಮದುವೆಯ ನಿಮಿತ್ತ ಊರಿಗೆ ಮರಳಿದ್ದರು. ಮದುವೆ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಆದ್ರೆ ಸಾಲಿಗ್ರಾಮ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುವ ಸಂದರ್ಭ ನಡೆದ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ.
ವರುಣ್ ಅವರು ತನ್ನ ಬೈಕಿನಲ್ಲಿ ಸಾಲಿಗ್ರಾಮ ಕಡೆಗೆ ಹೋಗುತ್ತಿದ್ದರು. ಚಿತ್ರಪಾಡಿ ಗ್ರಾಮದ ಬೆಲ್ಲದ ಗಣಪತಿ ದೇವಸ್ಥಾನ ಬಳಿ ಚಲಿಸುತ್ತಿದ್ದಾಗ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯಿಂದಾಗಿ ಬಂದ ಲಾರಿ ವರುಣ್ ಬೈಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಮುಂದೆ ಚಲಿಸುತ್ತಿದ್ದ ರೋಡ್ ರೋಲರಿಗೆ ಬೈಕ್ ತಾಗಿ ವರುಣ್ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ವರುಣ್ ಮೇಲೆಯೇ ಲಾರಿ ಹರಿದಿದೆ. ಪರಿಣಾಮ ವರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೋಟ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv