ಕುದುರೆ ಏರಿ ವರನ ವೇಷದಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

Public TV
1 Min Read
Nomination

ಲಕ್ನೋ: ದೇಶದಲ್ಲೆಡೆ ಚುನಾವಣಾ ಚಟುವಟಿಕೆಗಳು ಚುರುಕುಗೊಂಡಿವೆ. ಸಾಮಾನ್ಯವಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಅಭಿಮಾನಿಗಳ ಜೊತೆಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸುತ್ತಾರೆ. ಅಭಿಮಾನಿಗಳ ಜೊತೆ ಆಗಮಿಸುವ ಮೂಲಕವೇ ಕ್ಷೇತ್ರದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾರೆ. ಆದ್ರೆ ಉತ್ತರ ಪ್ರದೇಶದ ಶಾಹಜಹಾಂಪುರ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ಅಭ್ಯರ್ಥಿ ವರನಂತೆ ಡ್ರೆಸ್ ಧರಿಸಿ ಕುದುರೆ ಏರಿ ಬಂದು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಸಂಯುಕ್ತ ವಿಕಾಸ ಪಕ್ಷದ ಅಭ್ಯರ್ಥಿ ಕಿಶನ್, ವರನಂತೆ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬ್ಯಾಂಡ್ ಸದ್ದಿನೊಂದಿಗೆ ಜಿಲ್ಲಾ ಕಚೇರಿಗೆ ಆಗಮಿಸುತಿದ್ದಂತೆ ಚುನಾವಣಾ ಅಧಿಕಾರಿ ಆರ್ಕೆಸ್ಟ್ರಾದವರನ್ನು ಹೊರಗೆ ನಿಲ್ಲುವಂತೆ ಸೂಚನೆ ನೀಡಿದರು. ಬಳಿಕ ಸ್ನೇಹಿತರ ಜೊತೆಗೆ ಒಳಬಂದ ಕಿಶನ್ ನಾಮಪತ್ರವನ್ನು ಚುನಾವಣಾ ಅಧಿಕಾರಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಕಿಶನ್, ನಾನು ರಾಜಕಾರಣದ ಅಳಿಯನಾಗಿದ್ದು, ಮೇ 28ರ ಬಳಿಕ ವಧು ಬರುತ್ತಾಳೆಂದು ಹೇಳಿದ್ದಾರೆ.

Vaidh Raj Kishan up1

ಮೂರು ದಶಕಗಳ ಹಿಂದೆ ಕಿಶನ್, ತಮ್ಮ ನಗರದ ವಾರ್ಡ್ ಚುನಾವಣೆಗೆ ಮೊದಲ ಬಾರಿ ಸ್ಪರ್ಧೆ ಮಾಡಿದ್ದರು. ಇದಾದ ಬಳಿಕ ಒಟ್ಟು ಮೂರು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಮತ ಕೇಳಲು ವಿಶೇಷ ಶೈಲಿಯನ್ನು ಬಳಸಿಕೊಂಡಿದ್ದಾರೆ.

ಈ ಹಿಂದೆ ಕೋಣದ ಮೇಲೆ ಕುಳಿತು ಯಮರಾಜನ ವೇಷ ಧರಿಸಿ ನಾಮಪತ್ರ ಸಲ್ಲಿಸಿದ್ದರು. ಒಮ್ಮೆ ತಾವೇ ಶವದಂತೆ ಮಲಗಿ ಶವಯಾತ್ರೆಯ ಮೂಲಕ ಬಂದು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದರು. 1986 ಏಪ್ರಿಲ್ 8ರಂದು ನಾನು ಮದುವೆಯಾದ ದಿನ. ಇಂದು ನನ್ನ ಮದುವೆ ವಾರ್ಷಿಕೋತ್ಸವದ ಖುಷಿಯಲ್ಲಿ ವರನಂತೆ ಬಟ್ಟೆ ಧರಿಸಿ, ಹೂವಿನ ಮಾಲೆಯನ್ನು ಹಾಕಿಕೊಂಡು ಬಂದಿದ್ದೇನೆ ಎಂದು ಕಿಶನ್ ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *