ಬೀಜಿಂಗ್: 26 ವರ್ಷದ ಯುವತಿಯೊಬ್ಬಳು ತನ್ನ ಮದುವೆಯಲ್ಲಿ ಗಂಡನನ್ನು ತಮಾಷೆ ಮಾಡಲೆಂದು 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿಕೊಂಡು ಬಂದಿದ್ದಕ್ಕೆ ಆಕೆಯ ಮದುವೆಯೇ ಮುರಿದುಬಿದ್ದ ಘಟನೆ ಚೀನಾದಲ್ಲಿ ನಡೆದಿದೆ.
ಕ್ವಿಂಗ್ ಕಾವೋ (26) 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾಳೆ. ಕ್ವಿಂಗ್ ತನ್ನ ತಲೆ ಕೂದಲಿಗೆ ಬೂದಿ ಬಣ್ಣ ಹಾಗೂ ಬಿಳಿ ಬಣ್ಣದ ಗೆರೆಗಳನ್ನು ಹಾಕಿಕೊಂಡು 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿದ್ದಾಳೆ.
ತನಗೆ ವಯಸ್ಸಾದರೂ ನನ್ನ ಗಂಡ ನನ್ನನ್ನು ಪ್ರೀತಿಸುತ್ತಾನಾ ಎಂಬುದನ್ನು ಪರೀಕ್ಷಿಸಲು ಕ್ವಿಂಗ್ ಕಾವೋ ಈ ರೀತಿ ಮಾಡಿದ್ದಳು. ಆದರೆ ಮದುವೆ ಗಂಡು ಗುವೊ ಚಿಯನ್ ಇದನ್ನು ತಮಾಷೆಯಾಗಿ ತೆಗೆದುಕೊಳ್ಳದೇ ಗಂಭೀರವಾಗಿ ತೆಗೆದುಕೊಂಡಿದ್ದಾನೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಡುರಸ್ತೆಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಇಬ್ಬರ ಜಗಳದಿಂದ ಕೆಲವರಿಗೆ ತೊಂದರೆಯಾದರೆ, ಇನ್ನೂ ಕೆಲವರಿಗೆ ಮನರಂಜನೆ ನೀಡುತ್ತಿತ್ತು. ಅವರಿಬ್ಬರು ಜಗಳವಾಡುತ್ತಿದ್ದಾಗ ಕೆಲವರು ಫೋಟೋ, ವಿಡಿಯೋವನ್ನು ತೆಗೆದಿದ್ದಾರೆ.
ಕ್ವಿಂಗ್‍ನ ಮೇಕಪ್ ತೆರೆಯಲು ಗುವೊ ಹೇಳಿದ್ದಾನೆ. ಆದರೆ ಕ್ವಿಂಗ್ ಇದಕ್ಕೆ ನಿರಾಕರಿಸಿದ್ದಾಳೆ. ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ನನ್ನ ಮೇಕಪ್‍ನಿಂದ ನಿನಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಕ್ವಿಂಗ್ ಪ್ರತಿಕ್ರಿಯೆ ನೀಡಿದ್ದಾಳೆ.
ತಾನು ಎಷ್ಟು ಹೇಳಿದರೂ ಪತ್ನಿ ಕೇಳದ್ದಕ್ಕೆ ಸಿಟ್ಟಾದ ಗುವೋ ತನ್ನ ಕನ್ನಡಕವನ್ನು ಎಸೆದು, ಟ್ಯಾಕ್ಸಿ ಹಿಡಿದು ಅಲ್ಲಿಂದ ಹೊರಟು ಹೋಗಿದ್ದಾನೆ. ಆದರೆ ಕ್ವಿಂಗ್ ಅಳುತ್ತಾ ಅಲ್ಲಿಯೇ ಕುಳಿತು ಆತನಿಗಾಗಿ ಕಾದಿದ್ದಾಳೆ. ಆದರೆ ಗುವೋ ಮಾತ್ರ ಮತ್ತೆ ಹಿಂತಿರುಗಲಿಲ್ಲ. ನಂತರ ಕ್ವಿಂಗ್ ಕೂಡ ಟ್ಯಾಕ್ಸಿ ಹಿಡಿದು ಅಲ್ಲಿಂದ ಹೊರಟು ಹೋಗಿದ್ದಾಳೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.