ಕೊಪ್ಪಳ: ತಾನು ಮೆಚ್ಚಿದ ಜನ ನಾಯಕ ಮದುವೆಗೆ ಬರಲಿಲ್ಲ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ವಡಕಿ ಎನ್ನುವ ಪುಟ್ಟ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್ ಹೆಬ್ಬುಲಿ ಮದುವೆ ಕ್ಯಾನ್ಸಲ್ ಮಾಡಿದ ವ್ಯಕ್ತಿ. ಹೆಬ್ಬುಲಿ ಎನ್ನುವುದು ಇವರ ಕುಟುಂಬದ ಅಡ್ಡಹೆಸರು. ಮಂಜುನಾಥ್ ಗಂಗಾವತಿ ತಾಲೂಕಿನ ವಡಕಿ ಗ್ರಾಮದ ನಿವಾಸಿಯಾಗಿದ್ದು, ಬಳ್ಳಾರಿಯ ಬಿಜೆಪಿ ಸಂಸದ ಬಿ. ಶ್ರೀರಾಮುಲು ಅವರ ಅಪ್ಪಟ ಅಭಿಮಾನಿಯಾಗಿದ್ದಾನೆ. ಶ್ರೀರಾಮುಲು ತನ್ನ ಮದುವೆಗೆ ಬಾರದಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.
ಮನೆಯಲ್ಲಿ ಹಿರಿಯರೆಲ್ಲರೂ ಸೇರಿ ಮಂಜುನಾಥ್ ನಾಯಕ್ ಮತ್ತು ಸಹೋದರ ಹನುಮೇಶ್ ನಾಯಕ್ ಇಬ್ಬರ ಮದುವೆಯನ್ನು ಅದೇ ಗ್ರಾಮದ ಯುವತಿಯರಾದ ಲಕ್ಷ್ಮಿ ಮತ್ತು ರೇಖಾ ಎನ್ನುವವರ ಜೊತೆ ನಿಶ್ಚಯ ಮಾಡಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಮದುವೆಯಾಗಿ ಮಕ್ಕಳು ಕೂಡ ಆಗುತ್ತಿತ್ತು. ಆದರೆ ಮದುವೆ ನಿಶ್ಚಯವಾದ ನಂತರ ನಡೆದಿದ್ದೆ ಬೇರೆ. ವರ ಮಂಜುನಾಥ್ ನನ್ನ ಮದುವೆಗೆ ಶ್ರೀರಾಮುಲು ಬರಲೇಬೇಕು, ಇಲ್ಲವಾದರೆ ನಾನು ತಾಳಿ ಕಟ್ಟಲ್ಲ ಎಂದು ಹಠ ಮಾಡಿದ್ದಾನೆ. ಈತನ ಮಾತು ಕೇಳಿದ ಮನೆಯವರಿಗೆ ಶಾಕ್ ಆಗಿದೆ. ಮನೆಯವರೆಲ್ಲರೂ ಸೇರಿ ತಕ್ಕ ಮಟ್ಟಿಗೆ ಬುದ್ಧಿ ಹೇಳಿದ್ದಾರೆ. ಅವರೆಲ್ಲಾ ದೊಡ್ಡವರು, ನಮ್ಮಂತವರ ಮದುವೆಗೆ ಬರೋಕೆ ಅವರಿಗೆ ಸಮಯ ಇರೋಲ್ಲ ಎಂದು ಹೇಳಿದ್ದಾರೆ. ಆದರೆ ಇದ್ಯಾವುದನ್ನೂ ಲೆಕ್ಕಿಸದ ಆತ ಸತತ 2 ಬಾರಿ ಮದುವೆ ಕ್ಯಾನ್ಸಲ್ ಮಾಡಿದ್ದಾನೆ.
ಅಭಿಮಾನದ ಒತ್ತಡಕ್ಕೆ ಮನೆಯವರು ಕಂಗಾಲಾಗಿದ್ದಾರೆ. ಇನ್ನೂ ಹೀಗೆ ಆದರೆ ಇವನ ಮದುವೆ ಆಗಲ್ಲ. ಇವನ ಜೊತೆ ಅವನ ತಮ್ಮನ ಮದುವೆಯೂ ನಿಲ್ಲುತ್ತೆ ಎಂಬ ಚಿಂತೆಯಲ್ಲಿದ್ದಾರೆ. ಇವರಿಬ್ಬರು ಸಹೋದರರಾಗಿರುವುದರಿಂದ ಒಂದೇ ಖರ್ಚಿನಲ್ಲಿ 2 ಮದುವೆ ಮಾಡಿ ಮುಗಿಸಿಬಿಡೋಣ ಎನ್ನುವುದು ಮನೆಯವರ ಪ್ಲ್ಯಾನ್ ಆಗಿತ್ತು. ಆದರೆ ಮಂಜುನಾಥ್ ಹಠಕ್ಕೆ 2 ಸಲ ಮದುವೆ ಕ್ಯಾನ್ಸಲ್ ಆಗಿದ್ದು ಮನೆಯವರಿಗೆ ಇದು ದುಬಾರಿಯಾಗಿ ಪರಿಣಮಿಸಿದೆ.
ಇವೆಲ್ಲವನ್ನೂ ಬದಿಗಿಟ್ಟು ಮಂಜುನಾಥನ ಆಸೆಯಂತೆ 3ನೇ ಬಾರಿಗೆ ಮದುವೆ ಡೇಟ್ ಫಿಕ್ಸ್ ಮಾಡೋಕೆ ನೇರವಾಗಿ ಬಳ್ಳಾರಿಯ ಶ್ರೀರಾಮುಲು ಅವರ ಮನೆಗೆ ಮಂಜುನಾಥ್ ನನ್ನು ಕರೆದುಕೊಂಡು ಮನೆಯವರು ಮತ್ತು ಗ್ರಾಮಸ್ಥರು ಸೇರಿ 25 ಜನ ಹೋಗಿದ್ದಾರೆ. ಆದರೆ ದುರಾದೃಷ್ಟವಶಾತ್ ಅವತ್ತು ಶ್ರೀರಾಮುಲು ಮನೆಯಲ್ಲಿ ಇರಲಿಲ್ಲ. ಆದರೂ ಪರವಾಗಿಲ್ಲ ಅವರು ಬರೋತನಕ ಕಾಯುವುದಾಗಿ ಹೇಳಿ ಒಂದು ದಿನ ಶ್ರೀರಾಮುಲು ಮನೆ ಮುಂದೆಯೇ ಮಲಗಿಕೊಂಡಿದ್ದಾರೆ.
ಮುಂಜಾನೆ ಶ್ರೀರಾಮುಲು ಬರುವಿಕೆಗಾಗಿ ಕಾದಿದ್ದ ಜನರಿಗೆ ಖುಷಿ ಆಗಿದೆ. ಏಕಂದರೆ ಆ ದಿನ ಸಾಯಂಕಾಲ ಮನೆಗೆ ಬಂದ ರಾಮುಲುಗೆ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದಾರೆ. ನೀವು ಯಾವಾಗ ಫ್ರೀ ಇರುತ್ತೀರ ಅವತ್ತೇ ನಾವು ಮದುವೆ ಇಟ್ಕೋತೀವಿ ಎಂದು ಹೇಳಿ ಅವರಿಂದಲೇ ಡೇಟ್ ಫಿಕ್ಸ್ ಮಾಡಿಸಿದ್ದಾರೆ. ಮಂಜುನಾಥ್‍ನ ಅಭಿಮಾನಕ್ಕೆ ಮನಸೋತ ಶ್ರೀರಾಮುಲು, ಹುಡುಗನ ಜೊತೆ ಫೋಟೋ ತೆಗಿಸಿಕೊಂಡು, ಖಂಡಿತ ಮದುವೆಗೆ ಬರುತ್ತೇನೆ ಎಂದು ಹೇಳಿ ಕಳಿಸಿದ್ದಾರೆ.
ಇದೇ ಮಾರ್ಚ್ 4ರಂದು ಮಂಜುನಾಥ್ ಹೆಬ್ಬುಲಿ ಹಸೆಮಣೆ ಏರೋಕೆ ರೆಡಿ ಆಗಿದ್ದಾರೆ. ಶ್ರೀರಾಮುಲು ಬರೋದ್ ಕೇಳಿ ದಿಲ್ ಖುಷ್ ಆಗಿದ್ದಾನೆ. ಈ ಹಿಂದೆ ನಿಶ್ಚಯವಾಗಿದ್ದ ಹುಡುಗಿಯನ್ನೇ ಕೈ ಹಿಡಿಯಲಿದ್ದಾನೆ. ಕೊನೆಗೂ ತನ್ನ ನಾಯಕನ್ನು ಮದುವೆಗೆ ಕರೆಸುವ ಹಠದಲ್ಲಿ ಮಂಜುನಾಥ್ ಗೆದ್ದಿದ್ದಾನೆ. ಶ್ರೀರಾಮುಲು ಸಹ ಅಭಿಮಾನಿಯ ಮದುವೆಗೆ ಬಂದು ಹರಸಿ ಆಶೀರ್ವಾದ ಮಾಡೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.