ಕಾರವಾರ: ಕರ್ನಾಟಕ ಕರಾವಳಿಯಲ್ಲಿ ಅಪರೂಪವಾಗಿ ಕಾಣಸಿಗುವ ಗ್ರೀನ್ ಸೀ ಆಮೆಯ ಕಳೇಬರ ಇಂದು ಸಂಜೆ ಕಾರವಾರದ ರವೀಂದ್ರನಾಥ ಠಾಗೂರ್ ಕಡಲತೀರದಲ್ಲಿ ಪತ್ತೆಯಾಗಿದೆ.
ಇವುಗಳ ವಂಶವು ಅವನತಿಯಲ್ಲಿ ಇರುವುದರಿಂದಾಗಿ ವನ್ಯ ಜೀವಿ ಸೌಂರಕ್ಷಣ ಕಾಯ್ದೆ 1972ರ ಅನುಬಂಧ 1ರ ಅಡಿ ಇದು ಸಂರಕ್ಷಿಸಲ್ಪಟ್ಟಿದೆ. ಕೆಲವೇ ದಿನಗಳ ಹಿಂದೆ ಇದೇ ಜಾತಿಯ ಆಮೆಯ ಕಳೇಬರವೊಂದು ಕಾರವಾರದ ಕಡಲತೀರದಲ್ಲಿ ಪತ್ತೆಯಾಗಿತ್ತು. ಇದೀಗ ಮತ್ತೆ ಅದೇ ಜಾತಿಯ ಆಮೆಯ ಕಳೇಬರ ಪತ್ತೆಯಾಗಿದೆ.
ಗ್ರೀನ್ ಸೀ (chelonia mydus) ಎಂದು ಕರೆಯಲ್ಪಡುವ ಈ ಆಮೆಯು ಸಸ್ಯಹಾರಿ ಆಮೆಯಾಗಿದ್ದು, ಪೆಸಿಫಿಕ್ ಸಾಗರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರ ದೇಹದ ವಿಶೇಷ ರಚನೆಯಿಂದ ಇವುಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ. ಇದರ ಮುಖವು ಮೊಂಡವಾಗಿದ್ದು ಸಮುದ್ರದಲ್ಲಿ ಬೆಳೆಯುವ ಪಾಚಿ, ಹುಲ್ಲುಗಳನ್ನು ತಿನ್ನಲು ಬೇಕಾದ ವ್ಯವಸ್ಥೆಗೆ ರಚನೆಯಾಗಿದೆ. ಇದನ್ನೂ ಓದಿ: ಭಾರತದಲ್ಲಿ ಬಾಗಿಲು ಮುಚ್ಚಲಿದೆ ಫೋರ್ಡ್
ವಯಸ್ಕ ಆಮೆಯು 110 ರಿಂದ 190 ಕೆ.ಜಿ. ವರೆಗೆ ತೂಕವಿರುತ್ತದೆ. 8 ರಿಂದ 10 ಇಂಚು ಉದ್ದವಾಗಿ ಬೆಳೆಯುತ್ತದೆ. ದೇಹದ ಮೇಲ್ಭಾಗದ ಅಂಗ ರಚನೆಯೂ ವಿಶೇಷವಾಗಿದ್ದು, ಸ್ಲೂಪಿನಂತೆ ಇರುತ್ತದೆ. ಎರಡು ವರ್ಷಗಳಿಗೊಮ್ಮೆ ಮಾತ್ರ ಗೂಡುಕಟ್ಟಿ ಮೊಟ್ಟೆಯಿಡುತ್ತವೆ. ಇವುಗಳ ಸಂತತಿ ಇದೀಗ ಅಳವಿನಂಚಿನಲ್ಲಿದೆ.
ಇಂದು ಪತ್ತೆಯಾದ ಆಮೆಯು ಮೀನುಗಾರರ ಬಲೆಗೆ ಸಿಲುಕಿ ಉಸಿರುಗಟ್ಟಿ ಸತ್ತಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸ್ಥಳಕ್ಕೆ ಕಾರವಾರದ ಅರಣ್ಯಾಧಿಕಾರಿ ವಸಂತ್ ರೆಡ್ಡಿ, ಕೋಸ್ಟಲ್ ಮತ್ತು ಮರೈನ್ ಏಕೋ ಸಿಸ್ಟಮ್ ನ ವಲಯದ ಆರ್.ಎಫ್.ಓ ಪ್ರಮೋದ್, DRFO – ಚಂದ್ರಶೇಖರ, ನವೀನ್, ಮಹೇಶ್ ಮತ್ತು ಸಿಬ್ಬಂದಿ ಹಾಜರಾಗಿ ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.