ಬೆಂಗಳೂರು: ರಾಜಧಾನಿ ಬೆಂಗಳೂರಿನ ಆಡಳಿತದ ಹೊಣೆ ಹೊತ್ತಿದ್ದ ʻಬಿಬಿಎಂಪಿʼ (BBMP) ಹೆಸರು ಇತಿಹಾಸ ಪುಟ ಸೇರಲಿದ್ದು, ನಾಳೆಯಿಂದ (ಮೇ 15) ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಾಗಲಿದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು ʻಗ್ರೇಟರ್ ಬೆಂಗಳೂರು ಪ್ರಾಧಿಕಾರʼ (Greater Bengaluru Authority) ಆಗಿ ಬದಲಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಇಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ರಾಜ್ಯದ ಅತಿದೊಡ್ಡ ಸ್ಥಳೀಯ ಸರ್ಕಾರ ಆಗಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ, ಬೆಂಗಳೂರು ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಇದನ್ನೂ ಓದಿ: ಕರ್ನಲ್ ಸೋಫಿಯಾ ಪತಿ ಮನೆ ಮೇಲೆ RSS ದಾಳಿ ವದಂತಿ – ಸುಳ್ಳು ಸುದ್ದಿ ನಂಬದಂತೆ ಬೆಳಗಾವಿ ಎಸ್ಪಿ ಮನವಿ
ಇದರೊಂದಿಗೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಲ್ಲಿ (Bengaluru Administrative Act) ಸುಗಮ ಆಡಳಿತ ತರುವ ದೃಷ್ಟಿಯಿಂದ ಗರಿಷ್ಠ 7 ಪಾಲಿಕೆ ರಚನೆಗೆ ಪ್ರಸ್ತಾಪ ಮಾಡಲಾಗಿದೆ. ಈ ಕಾಯ್ದೆಗೆ ನಿಯಮಾವಳಿ ರೂಪಿಸಿದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಜೊತೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ಜಿಬಿಎ ಮುಖ್ಯ ಆಯುಕ್ತರು ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಜೊತೆಗೆ ಹೊಸ ಆಡಳಿತಾಧಿಕಾರಿಯನ್ನೂ ನೇಮಕ ಮಾಡಲಾಗುತ್ತದೆ. ಇದನ್ನೂ ಓದಿ: ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ಸುಮ್ಮನೆ ಬಿಡಲ್ಲ: ಪಾಕ್ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್
ಕಾಯ್ದೆ ಹಾದಿ ಹೇಗೆ?
ವಿಧಾನ ಮಂಡಲದಲ್ಲಿ ಮಾರ್ಚ್ 13ರಂದು ಅಂಗೀಕಾರವಾಗಿದ್ದ ʻಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024ʼಯನ್ನು ರಾಜ್ಯಪಾಲರ ಅಂಕಿತಕ್ಕಾಗಿ 2025ರ ಮಾರ್ಚ್ 17ರಂದು ಕಳುಹಿಸಲಾಗಿತ್ತು. ಮಸೂದೆಯು ಸಂವಿಧಾನದ 74ನೇʼ ತಿದ್ದುಪಡಿಗೆ ವಿರುದ್ಧವಾಗಿದೆ ಮತ್ತು ದೆಹಲಿ ಮಹಾನಗರ ಪಾಲಿಕೆಯ ವಿಭಜನೆ ಸಂದರ್ಭದಲ್ಲಿ ಆದಂತೆ ಸಮಸ್ಯೆಗಳು ಸೃಷ್ಟಿಯಾಗುತ್ತವೆʼ ಎಂದು ಬೆಂಗಳೂರು ಟೌನ್ ಹಾಲ್ ಸಂಘಟನೆ ಹಾಗೂ ಬಿಜೆಪಿ ನಾಯಕರ ನಿಯೋಗಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದವು. ಮಸೂದೆಯನ್ನು ತಡೆ ಹಿಡಿಯುವಂತೆಯೂ ಒತ್ತಾಯಿಸಿದ್ದವು. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು – ಪಾಕ್ ಬಂಧಿಸಿದ್ದ ಬಿಎಸ್‌ಎಫ್ ಯೋಧ ತಾಯ್ನಾಡಿಗೆ ವಾಪಸ್
ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು ʻಎರಡೂ ಮನವಿಗಳನ್ನು ನಾನು ಪರಿಶೀಲಿಸಿದ್ದೇನೆ. ಈ ಮಸೂದೆಯು ಕಾನೂನಾತ್ಮಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಒಳಗೊಂಡಿದೆ. ಆದ್ದರಿಂದ ಎರಡೂ ಮನವಿ ಪತ್ರಗಳಲ್ಲಿ ಪ್ರಸ್ತಾಪಿಸಿರುವ ಪ್ರಮುಖ ವಿಷಯಗಳ ಕುರಿತು ಸ್ಪಷ್ಟನೆ ಅಗತ್ಯವಿದೆ’ ಎಂದು ಮಾರ್ಚ್ 25ರಂದು ಮಸೂದೆಯನ್ನು ಹಿಂದಿರುಗಿಸಿದ್ದರು. ಅದಕ್ಕೆ ಅಗತ್ಯ ಸ್ಪಷನೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಏಪ್ರಿಲ್ 24ರಂದು ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದರು. ಅಂದು ಸಂಜೆಯೇ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024’ ಅನ್ನು ಅಧಿಸೂಚಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಇದನ್ನೂ ಓದಿ: ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ಸುಮ್ಮನೆ ಬಿಡಲ್ಲ: ಪಾಕ್ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್
ಮೇ 15ರಿಂದ:
ಸದ್ಯ ಬಿಬಿಎಂಪಿಯ 225 ವಾರ್ಡ್‌ಗಳು ಜೆಬಿಎ ವ್ಯಾಪ್ತಿಯಲ್ಲಿರಲಿದೆ. ನಂತರ ಬಿಬಿಎಂಪಿ ವ್ಯಾಪ್ತಿ ಮಾತ್ರ ʻಗ್ರೇಟರ್ ಬೆಂಗಳೂರು ಪ್ರದೇಶʼ ಎಂದಾಗಲಿದ್ದರೂ ನಂತರದ ದಿನಗಳಲ್ಲಿ ವ್ಯಾಪ್ತಿ ಹಿಗ್ಗಲಿದೆ. ತಲಾ ಸುಮಾರು 125 ವಾರ್ಡ್‌ಗಳ ಮೂರು ನಗರ ಪಾಲಿಕೆಗಳನ್ನು ರಚಿಸುವ ಯೋಜನೆ ಇದ್ದು ಅದಕ್ಕೆ ತಕ್ಕಂತೆ ʻಗ್ರೇಟರ್ ಬೆಂಗಳೂರು ಪ್ರದೇಶʼದ ಗಡಿಯನ್ನು ಗುರುತಿಸಲಾಗುತ್ತದೆ. ನಗರದ ಸುತ್ತಲಿರುವ ಕೈಗಾರಿಕಾ ಪ್ರದೇಶಗಳನ್ನೂ ಒಳಗೊಂಡಂತೆ ಎಲೆಕ್ಟ್ರಾನಿಕ್ ಸಿಟಿ ಅತ್ತಿಬೆಲೆ ಜಿಗಣಿ ಕೈಗಾರಿಕೆ ಪ್ರದೇಶ ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ʻಗ್ರೇಟರ್ ಬೆಂಗಳೂರು ಪ್ರದೇಶʼಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಕಾಯ್ದೆಯಲ್ಲೇ ಇರುವಂತೆ ಎಲ್ಲ ನಗರ ಪಾಲಿಕೆಗಳ ಹೆಸರು ʻಬೆಂಗಳೂರುʼ ಎಂದೇ ಆರಂಭವಾಗಬೇಕಿದೆ. ʻಬೆಂಗಳೂರು ಕೇಂದ್ರ ನಗರ ಪಾಲಿಕೆʼ ʻಬೆಂಗಳೂರು ಉತ್ತರ ನಗರ ಪಾಲಿಕೆʼ ʻಬೆಂಗಳೂರು ದಕ್ಷಿಣ ನಗರ ಪಾಲಿಕೆʼ… ಹೀಗೆ ಹೆಸರಿಸಲಾಗುತ್ತದೆ. ʻಗ್ರೇಟರ್ ಬೆಂಗಳೂರು ಪ್ರದೇಶʼ ವ್ಯಾಪ್ತಿಯನ್ನು ಹಿಗ್ಗಿಸಿದ ಮೇಲೆ ಅದರನ್ವಯ ಮೂರು ಅಥವಾ ಐದು ನಗರಪಾಲಿಕೆಗಳನ್ನು ರಚಿಸಲಾಗುತ್ತದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.