ರಾಯಚೂರು: ಕೋಟೆ ನಗರಿ ರಾಯಚೂರಿನಲ್ಲಿ ಕೋಟೆ ಜಾಗ ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಕಟ್ಟಡಗಳನ್ನ ಕಟ್ಟಿರೋದು ಹಳೆಯ ವಿಚಾರ. ಈಗ ಒತ್ತುವರಿಕೋರರು, ಭೂಗಳ್ಳರು ಸರ್ಕಾರಿ ಸ್ಮಶಾನ ಜಾಗಕ್ಕೆ ರೇಟ್ ಫಿಕ್ಸ್ ಮಾಡಿ ಮಾರಿಕೊಳ್ಳುತ್ತಿದ್ದಾರೆ.
ನಗರದ ಮೈಲಾರ ನಗರದಲ್ಲಿನ 582ನೇ ಸರ್ವೆ ನಂಬರ್ ನಲ್ಲಿನ ಒಟ್ಟು 214 ಎಕರೆ ಭೂಮಿಯಲ್ಲಿ 7 ಎಕರೆ 20 ಗುಂಟೆ ಇರುವ ಸ್ಮಶಾನ ಜಾಗವನ್ನ ಸೈಟ್ ಮಾಡಿ ಮಾರಲಾಗುತ್ತಿದೆ. ಇದನ್ನೆಲ್ಲಾ ಮಾಜಿ ಶಾಸಕ ಎ.ಪಾಪರೆಡ್ಡಿ ಮಾಡಿಸುತ್ತಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ.
Advertisement
10 ಸಾವಿರ ರೂಪಾಯಿ ಸ್ವಚ್ಛತೆಗೆ, 20 ಸಾವಿರ ಪಾಪಾರೆಡ್ಡಿಗೆ, 30 ಸಾವಿರ ನಗರಸಭೆ ಸದಸ್ಯರಿಗೆ, 20 ಸಾವಿರ ಮುನ್ನೂರು ಕಾಪು ಸಮಾಜಕ್ಕೆ ಹೀಗೆ ಒಟ್ಟು 80 ಸಾವಿರ ರೂಪಾಯಿಗೆ 30*40 ಚದರ ಅಡಿಯ ಒಂದು ನಿವೇಶನ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕ ಜಾಗವನ್ನ ಮಾರಿಕೊಳ್ಳುತ್ತಿರುವ ಪಾಪಾರೆಡ್ಡಿ ವಿರುದ್ಧ ಕ್ರಮ ಜರುಗಿಸಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ಸ್ಮಶಾನ ಜಾಗ ಮಾರಾಟಕ್ಕೆ ಅವಕಾಶ ಕೊಡಲ್ಲ ಅಂತ ನಗರಸಭೆ ಅಧ್ಯಕ್ಷರು ಹೇಳುತ್ತಿದ್ದಾರೆ.
Advertisement
ಕಡಿಮೆ ದುಡ್ಡಲ್ಲಿ ಒಂದು ಸೂರಾಗುತ್ತೆ ಅಂತ ಬಡ ಜನರು ಈಗಾಗಲೇ ನಿವೇಶನಕ್ಕಾಗಿ ದುಡ್ಡು ಕೊಟ್ಟು ಕಾಯುತ್ತಿದ್ದಾರೆ. ಆದ್ರೆ ಬಡಜನರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ಸರ್ಕಾರಿ ಜಾಗವನ್ನ ಮಾರಾಟ ಮಾಡುತ್ತಿರೋದು ನಿಜಕ್ಕೂ ದುರಂತ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.