ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Leelavathi) ಸೋಲದೇವನಹಳ್ಳಿ ತೋಟದಲ್ಲಿ ಇಂದು (ಡಿ.9) ಲೀಲಾವತಿ ಅಂತ್ಯಸಂಸ್ಕಾರ ನೆರವೇರಿದೆ. ಈ ಬೆನ್ನಲ್ಲೇ, ಅಜ್ಜಿ ಲೀಲಾವತಿ ಜೊತೆಗಿನ ಬಾಂಧವ್ಯದ ಬಗ್ಗೆ ಮೊಮ್ಮಗ ಯುವರಾಜ್ (Yuvaraj) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಜ್ಜಿಯ ಜೊತೆ ಒಡನಾಟ ಚೆನ್ನಾಗಿತ್ತು. ನಮ್ಮ ಅಜ್ಜಿ ಆತ್ಮಕ್ಕೆ ಶಾಂತಿ ಸಿಗಲಿ. ಕೊನೆಯದಾಗಿ ಕೆಲ ದಿನಗಳ ಹಿಂದೆ ಮನೆಗೆ ಬಂದಾಗ ಅಜ್ಜಿಯನ್ನ ನೋಡಿದ್ದೆ. ನಾನು ದೂರ ಹೋಗುವವರೆಗೆ ನನ್ನನ್ನ ನೋಡಿದ್ದರು ಎಂದು ಕಡೆಯ ಭೇಟಿಯ ಬಗ್ಗೆ ಮೊಮ್ಮಗ ಯುವರಾಜ್ ಸ್ಮರಿಸಿದ್ದಾರೆ.
ಅಂತ್ಯಕ್ರಿಯೆ ಮುಕ್ತಾಯದ ಬಳಿಕ ವಿನೋದ್ ರಾಜ್ (Vinod Raj) ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮುಗಿದಿದೆ. ನಾಳೆ ಹಾಲು ತುಪ್ಪ ಇರಲಿದೆ. 11 ದಿನದ ಕಾರ್ಯ ಬಗ್ಗೆ ತೀರ್ಮಾನ ಮಾಡಿ ಹೇಳುತ್ತೇವೆ. ಇಡೀ ರಾಜ್ಯದ ಜನತೆಗೆ ಸರ್ಕಾರಕ್ಕೆ ನಮನ ಸಲ್ಲಿಸುತ್ತೇವೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಸೋಲದೇವನಹಳ್ಳಿ ತೋಟದಲ್ಲಿ ಲೀಲಾವತಿ ಅಂತಿಮ ಸಂಸ್ಕಾರ
ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.