ಅರ್ಜೆಂಟಿನಾ: ವೃದ್ಧೆಯೊಬ್ಬರು ತಮ್ಮ 99ನೇ ವಯಸ್ಸಿನಲ್ಲಿ ಶಾಲೆಗೆ ಹೋಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಆಗಿದ್ದು, ಇಳಿ ವಯಸ್ಸಿನಲ್ಲಿ ಪಾಠ ಕೇಳಲು ಹೊರಟ ಈ ವೃದ್ಧೆ ಸದ್ಯ ನೆಟ್ಟಿಗರ ಮನ ಗೆದ್ದಿದ್ದಾರೆ.
ಹೌದು. ಅರ್ಜೆಂಟಿನಾದ ಎಸೆಬಿಯಾ ಲಿಯೋನಾರ್ ಕೋರ್ಡಲ್(99) ಸಣ್ಣ ವಯಸ್ಸಿನಲ್ಲಿ ಕೌಟುಂಬಿಕ ಸಮಸ್ಯೆ ಹಾಗೂ ತನ್ನ ತಾಯಿಯನ್ನ ಕಳೆದುಕೊಂಡ ಪರಿಣಾಮ ಶಿಕ್ಷಣವನ್ನು ಬಿಟ್ಟಿದ್ದರು. ಆದ್ದರಿಂದ ತಮ್ಮ ಬಾಲ್ಯದಲ್ಲಿ ಕಲಿಯಲಾಗದ ಶಿಕ್ಷಣವನ್ನು ಪಡೆಯಲು, ಲಿಯೋನಾರ್ ತಮ್ಮ ಜೀವನದ ಕೊನೆಗಾಲದಲ್ಲಿ ಲೆಪ್ರಿಡಾದ ವಯಸ್ಕರ ಶಿಕ್ಷಣದ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದಾರೆ.
ತನ್ನ 98 ನೇ ವಯಸ್ಸಿನಲ್ಲಿ ಶಾಲೆಗೆ ಸೇರಿದ ಲಿಯೋನಾರ್ ಒಂದು ದಿನವೂ ಶಾಲೆಗೆ ಚಕ್ಕರ್ ಹಾಕಿಲ್ಲ. ಪ್ರತಿ ಮಂಗಳವಾರ, ಬುಧವಾರ ಹಾಗೂ ಗುರುವಾರ ಇವರ ಶಿಕ್ಷಕಿ ಪಟ್ರೇಶಿಯಾ, ಇವರ ಮನೆಗೆ ಬಂದು ಶಾಲೆಗೆ ಕರೆದುಕೊಂಡು ಹೋಗುತ್ತಾರೆ. ವಯಸ್ಸಾದಂತೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ. ಆದ್ರೆ ಶಾಲೆಯಲ್ಲಿ ನಡೆಯುವ ಪ್ರತಿ ಪಾಠದ ಬಗ್ಗೆ ನಾನು ನೆನಪಿಟ್ಟುಕೊಳ್ಳುತ್ತೇನೆ. ನಾನು ಶಾಲೆಗೆ ಸೇರಿದಾಗ ನನಗೆ ಓದಲು ಬರೆಯಲು ಬರುತ್ತಿರಲಿಲ್ಲ. ಈಗ ಅವೆಲ್ಲವೂ ಅಭ್ಯಾಸವಾಗಿದೆ. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಬಳಸುವುದು ಹೇಗೆ ಎಂಬುದನ್ನ ಕಲಿಯಲಿದ್ದೇನೆ ಎಂದು ಎಸೆಬಿಯಾ ತಮ್ಮ ಶಾಲೆಯ ಅನುಭವವನ್ನು ಹಂಚಿಕೊಂಡಿದ್ದಾರೆ.
ಲಿಯೋನಾರ್ ಅವರು ವಯಸ್ಕರ ಶಿಕ್ಷಣಕ್ಕೆ ಹೋಗುವ ವಿಡಿಯೋ ಸದ್ಯ ಸಖತ್ ವೈರಲ್ ಆಗಿದೆ. ಇಳಿವಯಸ್ಸಿನ ಈ ವಿದ್ಯಾರ್ಥಿನಿಯ ಕಥೆಗೆ ಅನೇಕ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ಈ ವೃದ್ಧೆಯ ಛಲಕ್ಕೆ ಮತ್ತು ಕಲಿಯುವ ಗಟ್ಟಿತನಕ್ಕೆ ಭೇಷ್ ಅಂತ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.