ಬೆಂಗಳೂರು: ನಾಳೆ ಬೆಳಗ್ಗೆ ಹೊತ್ತಿಗೆಲ್ಲ ಹಸ್ತಿನಾಪುರದ ವೈಭವ ಎಲ್ಲರೆದುರು ಅನಾವರಣಗೊಳ್ಳಲಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಐತಿಹಾಸಿಕ ಕ್ಷಣ. ಇಂಥಾ ಅದ್ಧೂರಿ ಪೌರಾಣಿಕ ಚಿತ್ರವನ್ನು ಬರಮಾಡಿಕೊಳ್ಳಲು ಎಂತೆಂಥಾ ತಯಾರಿಗಳು ನಡೆಯುತ್ತಿವೆ ಅನ್ನೋದೇ ಕುರುಕ್ಷೇತ್ರದ ಬಗ್ಗೆ ಕರ್ನಾಟಕದಲ್ಲಿ ಎಂತಾ ಅಭಿಮಾನ, ಪ್ರೀತಿ ಇದೆ ಅನ್ನೋದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಅಂತೂ ಈ ಕುರುಕ್ಷೇತ್ರ ವರಮಹಾಲಕ್ಷ್ಮಿ ಹಬ್ಬದಂದೇ ಮತ್ತೊಂದು ಬಗೆಯ ಹಬ್ಬದ ವಾತಾವರಣ ಸೃಷ್ಟಿಸಿದೆ.
Advertisement
ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿವೆಯೆಂದರೆ ಅಭಿಮಾನಿಗಳು ಶಕ್ತಿ ಮೀರಿ ಕಟೌಟು, ಶೃಂಗಾರ ಅಂತೆಲ್ಲ ಶ್ರಮಿಸುತ್ತಾರೆ. ಆದರೆ ಕುರುಕ್ಷೇತ್ರದ ವಿಚಾರದಲ್ಲಿ ಪ್ರೇಕ್ಷಕರ ವಲಯದಲ್ಲಿರೋದು ಭಕ್ತಿ ಮತ್ತು ಅಭಿಮಾನ ಬೆರೆತ ಭಾವ. ಅದು ಅಭಿಮಾನವನ್ನೂ ಮೀರಿದಂಥಾ ಕಲಾಪ್ರೇಮವೆಂದರೂ ತಪ್ಪೇನಿಲ್ಲ. ನಾಳೆ ಕುರುಕ್ಷೇತ್ರ ಬಿಡುಗಡೆಯಾಗಲಿರೋ ಕರ್ನಾಟಕದ ಬಹುತೇಕ ಥೇಟರುಗಳನ್ನು ದೇವಸ್ಥಾನವೆಂಬಂತೆ ಶೃಂಗರಿಸಲಾಗಿದೆ. ಅದರ ಮುಂದೆ ಎಲ್ಲ ಶೃಂಗಾರಕ್ಕೂ ಕಳಶವಿಟ್ಟಂತೆ ದುರ್ಯೋಧನ ಮತ್ತು ಭೀಷ್ಮರ ಕಟೌಟುಗಳು ಮಿರುಗುತ್ತಿವೆ.
Advertisement
Advertisement
ಅದರಲ್ಲಿಯೂ ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಂತೂ ಕುರುಕ್ಷೇತ್ರವನ್ನು ಬರಮಾಡಿಕೊಳ್ಳುವ ಸಂಭ್ರಮಕ್ಕೆ ಮೇರೆಯೇ ಇಲ್ಲ. ಇಲ್ಲಿ ಈಗಾಗಲೇ ಐವತ್ತು ಅಡಿ ಎತ್ತರದ ಕಟೌಟ್ ನಿಲ್ಲಿಸಿರೋ ಅಭಿಮಾನಿಗಳು ಭರ್ಜರಿ ಮೆರವಣಿಗೆಗೂ ಸಿದ್ಧತೆ ಮಾಡಿಕೊಂಡಿದ್ದಾರೆ. ಆ ಮೆರವಣಿಗೆಯಲ್ಲಿ ಐವತ್ತು ಜೋಡೆತ್ತುಗಳು, ಐವತ್ತು ಆಟೋಗಳು, ಐವತ್ತು ಬೈಕ್‍ಗಳು ಮತ್ತು ಐವತ್ತು ಬಗೆಯ ಜಾನಪದ ಕಲಾವಿದರು ಈ ಮೆರವಣಿಗೆಯನ್ನು ಮಿರುಗಿಸಲಿದ್ದಾರೆ. ಕುರುಕ್ಷೇತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತನೇ ಚಿತ್ರವಾದ್ದರಿಂದಲೇ ಐವತ್ತು ಜೋಡೆತ್ತುಗಳ ಮೂಲಕವೇ ಕುರುಕ್ಷೇತ್ರವನ್ನು ಬರಮಾಡಿಕೊಳ್ಳಲು ಮಂಡ್ಯದ ಮಂದಿ ನಿರ್ಧರಿಸಿದ್ದಾರೆ.
Advertisement
ಇಂದು ಮಧ್ಯರಾತ್ರಿಯಿಂದಲೇ ಕುರುಕ್ಷೇತ್ರ ಪ್ರದರ್ಶನ ಕಾಣುತ್ತಿದೆ. ಅದಾಗಲೇ ಅಭಿಮಾನಿಗಳು ಮತ್ತೊಂದಷ್ಟು ವಿಶೇಷವಾದ ಕಾರ್ಯಕ್ರಮಗಳ ಮೂಲಕ ಕುರುಕ್ಷೇತ್ರ ಸಂಭ್ರಮಕ್ಕೆ ರೆಡಿಯಾಗುತ್ತಿದ್ದಾರೆ. ನಾಳೆ ಅಭಿಮಾನಿಗಳಿಗೆ ಹಂಚಲು ಬರೋಬ್ಬರಿ ಐವತ್ತು ಸಾವಿರ ಲಡ್ಡು ತಯಾರಾಗುತ್ತಿದೆ. ಇದನ್ನು ಕೂಡಾ ಅಭಿಮಾನಿಗಳು ಸೇರಿಯೇ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ದರ್ಶನ್ ಅಭಿನಯದ ಐವತ್ತನೇ ಚಿತ್ರವನ್ನು ಹಬ್ಬವಾಗಿಸಲು ಭರ್ಜರಿ ತಯಾರಿ ನಡೆದಿದೆ.