ವಿಜಯಪುರ: ಪಿಂಚಣಿ ಹಣ ನೀಡದ್ದಕ್ಕೆ ಬೇಸತ್ತು ವೃದ್ಧೆ ತಹಶೀಲ್ದಾರ್ ಕಚೇರಿಗೆ ವಿಷದ ಬಾಟಲಿ ಸಮೇತ ಬಂದು ಆತ್ಮಹತ್ಯೆಗೆ ಮಾಡಿಕೊಳ್ಳಲು ಮುಂದಾದ ಘಟನೆ ವಿಜಯಪುರದ ಸಿಂಧಗಿಯಲ್ಲಿ ನಡೆದಿದೆ.
ಸಿಂದಗಿ ತಾಲೂಕಿನ ಸಾಸಾಬಾಳ ಗ್ರಾಮದ ನೀಲವ್ವ ರೋಡಗಿ (73) ಪಿಂಚಣಿಗಾಗಿ ಪರದಾಡುತ್ತಿರುವ ವಯೋವೃದ್ಧೆ. ನೀಲವ್ವ ಅವರಿಗೆ ತಿಂಗಳಿಗೆ 500 ರೂ. ಪಿಂಚಣಿ ಬರುತ್ತಿತ್ತು. ಆದ್ರೆ ಕಳೆದ ಒಂದು ವರ್ಷದಿಂದ ಪಿಂಚಣಿ ಹಣ ನೀಡದೆ ಪೋಸ್ಟ್ ಮಾಸ್ಟರ್ ಸತಾಯಿಸುತ್ತಿದ್ದಾನಂತೆ. ನೀಲವ್ವ ಏಕಾಂಗಿ ವೃದ್ಧೆ ಆಗಿದ್ದು, ಪಿಂಚಣಿ ಹಣದಿಂದಲೆ ಉಪಜೀವನ ನಡೆಸುತ್ತಿದ್ದಾರೆ.
ಇದರ ಬಗ್ಗೆ ಸಾಕಷ್ಟು ಬಾರಿ ಪೋಸ್ಟ್ ಮಾಸ್ಟರ್‍ಗೆ ಮನವಿ ಮಾಡಿದ್ರೂ ಕ್ಯಾರೆ ಎನ್ನದ ಪೋಸ್ಟ್ ಮಾಸ್ಟರ್ ಅಸಡ್ಡೆ ತೋರಿದ್ದಾನಂತೆ. ಇದರಿಂದ ಮನನೊಂದು ನೀಲವ್ವ ಬಾಟಲಿಯೊಂದಿಗೆ ಸಿಂಧಗಿ ತಹಶೀಲ್ದಾರ್ ಕಛೇರಿಗೆ ಆಗಮಿಸಿದ್ದಾರೆ. ಅಲ್ಲದೇ ಪಿಂಚಣಿ ಹಣ ನೀಡಿ ಇಲ್ಲದಿದ್ದರೆ ನಾನು ಇಲ್ಲಿಯೇ ವಿಷ ಸೇವಿಸಿ ಸಾಯುತ್ತೇನೆಂದು ಪಟ್ಟು ಹಿಡಿದಿದ್ದರು.
ಬಳಿಕ ಒಂದು ವಾರದೊಳಗೆ ಪಿಂಚಣಿ ಹಣ ನೀಡುವುದಾಗಿ ತಹಶೀಲ್ದಾರ್ ಹೇಳಿ ಅಜ್ಜಿಯನ್ನು ಕಳುಹಿಸಿದ್ದಾರೆ.