ಉಡುಪಿ: ಕಡೆಗೋಲು ಕೃಷ್ಣನ ನಗರಿ ಅನ್ನಬ್ರಹ್ಮನ ಕ್ಷೇತ್ರ ಉಡುಪಿಯಲ್ಲಿ ಎರಡು ದಿನಗಳ ಕಾಲ ನಡೆದ ಅಷ್ಟಮಿ ಸಂಪನ್ನಗೊಂಡಿದೆ. ಮಧ್ಯಾಹ್ನ ನಡೆದ ವಿಟ್ಲಪಿಂಡಿ ಮಹೋತ್ಸವದಲ್ಲಿ ಸಾವಿರಾರು ಮಂದಿ ಕೃಷ್ಣ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು.
ಚಿನ್ನದ ರಥದಲ್ಲಿ ವಿರಾಜಮಾನನಾದ ಕಡೆಗೋಲು ಶ್ರೀಕೃಷ್ಣನ ರಥದಿಂದ ಭಕ್ತ ಸಾಗರದತ್ತ ಸ್ವಾಮೀಜಿಗಳು ಪ್ರಸಾದವನ್ನು ಎಸೆದರು. ಕೃಷ್ಣನ ಮೂಲ ಪ್ರಸಾದವನ್ನು ಸ್ವೀಕರಿಸಲು ಸಾವಿರಾರು ಮಂದಿ ಭಕ್ತರು ಚಿನ್ನದ ರಥ ಮುಗಿಬಿದ್ದರು.
Advertisement
ಚಿನ್ನದ ರಥೋತ್ಸವಕ್ಕೆ ರಂಗು ತುಂಬಿದ್ದು ಸಾವಿರಾರು ವೇಷಗಳು. ಸಾಂಪ್ರದಾಯಿಕ ಹುಲಿ ಕುಣಿತ , ಕರಡಿ ವೇಷ, ವಿಭಿನ್ನ ರಾಕ್ಷಸರು, ಗಮನ ಸೆಳೆದರು. ಶ್ರೀಕೃಷ್ಣನ ರಥೋತ್ಸವ ಸಾಗುತ್ತಿದ್ದಂತೆ ಮುಂಭಾಗದಲ್ಲಿ ಸಾಂಪ್ರದಾಯಿಕ ಗೊಲ್ಲ ವೇಷಧಾರಿಗಳು ಮೊಸರು ಕುಡಿಕೆಯನ್ನು ನಡೆಸಿದರು. ಶ್ರೀ ಕೃಷ್ಣ ಬೆಣ್ಣೆ ಪ್ರಿಯ , ಮೊಸರು- ತುಪ್ಪ ಪ್ರಿಯ ಅನ್ನುವ ವಾಡಿಕೆ ಇದೆ. ಈ ಹಿನ್ನೆಲೆಯಲ್ಲಿ ಈ ಮೊಸರು ಕುಡಿಕೆ ಉತ್ಸವವನ್ನು ಉಡುಪಿಯಲ್ಲಿ ಮಾತ್ರ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ.
Advertisement
Advertisement
ಮುಂಭಾಗದ ರತ್ನ ಖಚಿತ ರಥದಲ್ಲಿ ಚಂದ್ರಮೌಳೇಶ್ವರ ಮತ್ತು ಅನಂತೇಶ್ವರ ದೇವರನ್ನು ಹೊತ್ತು ಸಾಗಲಾಯಿತು. ಹಿಂಭಾಗದ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಎಂಟು ಮಠಗಳು ಇರುವ ರಥಬೀದಿಗೆ ಒಂದು ಸುತ್ತು ಬಂದ ನಂತರ ಶ್ರೀಕೃಷ್ಣನ ಮೃನ್ಮಯ ಮೂರ್ತಿಯನ್ನು ಮಠದ ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಯಿತು. ಚಾತುರ್ಮಾಸ್ಯದ ಸಂದರ್ಭದಲ್ಲಿ ಭಗವಾನ್ ಶ್ರೀಕೃಷ್ಣ ಯೋಗ ನಿದ್ರೆಯಲ್ಲಿ ಇರುತ್ತಾರೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.
Advertisement
ಮೆರವಣಿಗೆ ನಂತರ ಪೇಜಾವರ ಕಿರಿಯ ಶ್ರೀಪಾದರು ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಿದರು. ಕೃಷ್ಣನ ಜಲಸ್ತಂಭನದ ಮೂಲಕ ಎರಡು ದಿನಗಳ ಅಷ್ಟಮಿಗೆ ತೆರೆ ಬಿದ್ದಿದೆ. ಇದಾದ ನಂತರ ರಥಬೀದಿ ಪಾರ್ಕಿಂಗ್ ಏರಿಯಾದಲ್ಲಿ ಹತ್ತಾರು ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪೇಜಾವರ ಶ್ರೀಗಳ ಐತಿಹಾಸಿಕ ಐದನೇ ಪರ್ಯಾಯದ ಕೊನೆಯ ಅಷ್ಟಮಿಯನ್ನು ಆಚರಿಸಲಾಯಿತು. ಪೇಜಾವರ ಶ್ರೀಗಳು ದಾಖಲೆಯ ಎಂಬತ್ತನೇ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡರು , ತನ್ನ ಪರ್ಯಾಯದ ಹತ್ತನೇ ಅಷ್ಟಮಿಯನ್ನು ಪೂರೈಸಿದ್ದಾರೆ.